ಬೆಂಗಳೂರು: ಸೋಮವಾರದ ವಿಧಾನಸಭೆ ಕಲಾಪದ ವೇಳೆ ಚಿಲುಮೆ ಸಂಸ್ಥೆಯ ವಿಚಾರ ಪ್ರತಿಧ್ವನಿಸಿತು. ಈ ಸಂಸ್ಥೆಯ ಹೆಸರು ಉಲ್ಲೇಖಿಸಿ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಅವರ ಕುರಿತಾಗಿ ಸಚಿವ ಭೈರತಿ ಸುರೇಶ್ ಹೇಳಿದ ಮಾತು ವಾಕ್ಸಮರಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅಶ್ವತ್ಥ ನಾರಾಯಣ, "2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದರು" ಎಂದರು. ಇದಕ್ಕೆ ಸಚಿವ ಭೈರತಿ ಸುರೇಶ್ ಆಕ್ಷೇಪಿಸಿ, "ಏಕೆ ದಾರಿ ತಪ್ಪಿಸುತ್ತಿದ್ದೀರಿ?. ಹತ್ತು ಕೆಜಿ ಕೊಡುತ್ತೇವೆ ಎಂದು ಯಾವತ್ತೂ ಹೇಳಿಲ್ಲ. ತಪ್ಪು ಮಾಹಿತಿಯನ್ನು ಸದನಕ್ಕೆ ಕೊಡಬೇಡಿ" ಎಂದರು. "ನೀವು ಆ ಸಂದರ್ಭದಲ್ಲಿ ಶಾಸಕ ಆಗಿರಲಿಲ್ಲ, ನಿಮಗೆ ಹೇಗೆ ಗೊತ್ತು?" ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು. "ನಾನು ಎಂಎಲ್ಸಿ ಆಗಿದ್ದೆ, ಎಂಎಲ್ಸಿ ಶಾಸಕ ಅಲ್ವಾ ಹಂಗಾದ್ರೆ? ತಮಗೆ ಚಿಲುಮೆ ಕಂಪನಿ ತಪ್ಪು ಮಾಹಿತಿ ಕೊಟ್ಟಿರಬಹುದು" ಎಂದು ಭೈರತಿ ಕಾಲೆಳೆದರು.
ಚೆಲುಮೆ, ಒಲುಮೆ ಎಲ್ಲವೂ ನಿಮ್ಮದೇ ಎಂಬ ಭೈರತಿ ಹೇಳಿಕೆಗೆ ಅಶ್ವತ್ಥ ನಾರಾಯಣ ಆಕ್ಷೇಪ ವ್ಯಕ್ತಪಡಿಸಿದರು. "ಸಚಿವರು ತಪ್ಪು ಮಾಹಿತಿ ನೀಡುತ್ತಿದ್ದಾರೆ, ನಿಮ್ಮ ಶಾಸಕರು ಹಾಗೆ ಮಾಡಿರಬೇಕು, ನಾನು ಹಾಗೆ ಮಾಡಿಲ್ಲ" ಎಂದು ಅಶ್ವತ್ಥ ನಾರಾಯಣ ಗರಂ ಆದರು. ನಿಮ್ಮ ಹಾಗೆ ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ ಎಂದು ಅಶ್ವತ್ಥ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಏಕವಚನದಲ್ಲೇ ಮಾತನಾಡುತ್ತಾ, ಚಿಲುಮೆ ಬಗ್ಗೆ ಏನು ಗೊತ್ತು ನಿನಗೆ? ಎಂದರು. ಇಬ್ಬರ ನಡುವೆ ವಾಕ್ಸಮರ ನಡೆಯಿತು. ನಾನು ಚಿಲುಮೆ ಸಂಸ್ಥೆ ನಿಮ್ಮದು ಎಂದು ಹೇಳುತ್ತಿಲ್ಲ ಎಂದು ಬೈರತಿ ಸಮಜಾಯಿಷಿ ನೀಡಿದರು.
ಚಿಲುಮೆ ಸಂಸ್ಥೆಯ ಮೇಲಿನ ಆರೋಪವೇನು?: ಕಳೆದ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಬೆಂಗಳೂರಿನ ಮತದಾರರ ಮಾಹಿತಿಯನ್ನು ಚಿಲುಮೆ ಸಂಸ್ಥೆ ಆದೇಶರಹಿತವಾಗಿ ಸಂಗ್ರಹಿಸುತ್ತಿತ್ತು. ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ಪಡೆದುಕೊಂಡಿದ್ದ ಸಂಸ್ಥೆಯು ಮತದಾರರ ದತ್ತಾಂಶವನ್ನು ಸಂಗ್ರಹಿಸಿದೆ. ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಂದಿನ ಬಿಜೆಪಿ ಸರ್ಕಾರ ಚಿಲುಮೆ ಸಂಸ್ಥೆಯಿಂದ ಅಕ್ರಮವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ನಂತರ ಬಿಬಿಎಂಪಿ ಈ ಬಗ್ಗೆ ತನಿಖೆಗೆ ಮುಂದಾಗಿ ಸಂಸ್ಥೆಗೆ ನೀಡಿದ್ದ ಆಧಾರ್ ನವೀಕರಣದ ಹಕ್ಕು ವಾಪಸ್ ಪಡೆದಿತ್ತು.
ಇದನ್ನೂ ಓದಿ: ಚಿಲುಮೆಯಿಂದ ಒಂದೇ ತಿಂಗಳಲ್ಲಿ ಹಲವು ಮತದಾರರ ಹೆಸರು ರದ್ದು; ತನಿಖೆ ಚುರುಕು