ಬೆಂಗಳೂರು : ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಮುನಿಸಿಕೊಂಡಿರುವ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದಿಂದ ದೂರ ಉಳಿದು ಮತ್ತೊಮ್ಮೆ ತಮ್ಮ ಅಸಮಾಧಾನ ಬಹಿರಂಗವಾಗಿ ಹೊರಹಾಕಿದ್ದಾರೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗುವಂತೆ ಅಶೋಕ್‌ಗೆ ಪಕ್ಷದ ಕೆಲ ಹಿರಿಯರು ಸಲಹೆ ನೀಡಿದ್ದರು, ಆದರೆ ಚುನಾವಣಾ ಪ್ರಚಾರಕ್ಕೆ ತೆರಳದೆ ಅಶೋಕ್ ದೂರ ಉಳಿದು ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ, ಡಿಸಿಎಂಗಳು, ಕೆಲ ಸಚಿವರು ಈಗಾಗಲೇ ಚುನಾವಣಾ ಪ್ರಚಾರ ಕೈಗೊಂಡು ವಾಪಸ್ ಬಂದರೂ ಕೂಡ ಅಶೋಕ್ ದೂರ ಉಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೋಗಿ ಪ್ರಚಾರ ಮಾಡಿದ ಮೇಲೆ ನಮ್ಮದೇನು ಕೆಲಸ ಅಲ್ಲಿ ಎಂದು ಆಪ್ತರ ಬಳಿ ಅಶೋಕ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇದೆಲ್ಲವನ್ನೂ ನೋಡಿದರೆ ಇನ್ನು ಒಕ್ಕಲಿಗ ನಾಯಕರ ಮುನಿಸು ಬಗೆಹರಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪ್ರವಾಹ ಸಂತ್ರಸ್ತರ ವಿಚಾರದಲ್ಲಿಯೂ ಇದೇ ಧೋರಣೆ ಅನುಸರಿಸಿದ ಅಶೋಕ್, ಕಂದಾಯ ಸಚಿವರಾಗಿ ಸಂತ್ರಸ್ಥರ ಜೊತೆ ವಾಸ್ತವ್ಯ ಮಾಡುತ್ತೇನೆ ಎಂದಿದ್ದರು, ಆದರೆ ಅದನ್ನೂ ಮಾಡಲಿಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಡಿಸಿಎಂ ಪಟ್ಟ ಸಿಗದಿದ್ದಕ್ಕೆ ಅಶೋಕ್ ಮುನಿಸು ಇನ್ನೂ ಮುಂದುವರೆದಿದೆ ಎನ್ನಲಾಗುತ್ತಿದೆ.