ಬೆಂಗಳೂರು: ಹಲವು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ದೋಚಿದ್ದ ದಂಪತಿ ಅನ್ನು ಆರ್.ಆರ್. ನಗರ ಪೊಲೀಸರು ಬಂಧಿಸಿದ್ದಾರೆ.
ಆರ್.ಆರ್. ನಗರ ನಿವಾಸಿಗಳಾಗಿರುವ ಚಂದ್ರಮ್ಮ ಹಾಗೂ ಆಕೆಯ ಗಂಡ ವೆಂಕಟೇಶ್ ಬಂಧಿತ ದಂಪತಿ. ಒಂದೂವರೆ ವರ್ಷಗಳಿಂದ ಶಶಿರೇಖಾ ಎಂಬುವರ ಮನೆಯಲ್ಲಿ ಚಂದ್ರಮ್ಮ ಮನೆಗೆಲಸ ಮಾಡುತ್ತಿದ್ದರು. ಮನೆಯೊಡತಿ ಶಶಿರೇಖಾ ಪತಿ ಯು.ಕೆ. ಯಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದುಡಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದರು.
ಶಶಿರೇಖಾ ಬಳಿ ಹಣ ಹಾಗೂ ಚಿನ್ನಾಭರಣ ಇರುವುದನ್ನು ಅರಿತಿದ್ದ ಚಂದ್ರಮ್ಮ ಯಾರೂ ಇಲ್ಲದ ಸಮಯ ನೋಡಿ ಬೀರುವಿನಲ್ಲಿದ್ದ ಸುಮಾರು 45 ಲಕ್ಷ ಮೌಲ್ಯದ ವಿವಿಧ ಚಿನ್ನಾಭರಣ ಹಾಗೂ 10 ಲಕ್ಷ ರೂ. ನಗದು ಸೇರಿ ಒಟ್ಟು 55 ಲಕ್ಷ ರೂ.ವಸ್ತುಗಳನ್ನು ಕದ್ದು, ಎಂದಿನಂತೆ ಕೆಲಸಕ್ಕೆ ಬಂದಿದ್ದಳು. ಅಷ್ಟೇ ಅಲ್ಲದೇ, ಕದ್ದ ಆಭರಣಗಳನ್ನು ಗಂಡ ವೆಂಕಟೇಶ್ ಮೂಲಕ ಬೇರೆಡೆ ಸಾಗಿಸಿದ್ದಳು ಎನ್ನಲಾಗ್ತಿದೆ.
ಮನೆಯೊಡತಿಗೆ ಚಂದ್ರಮ್ಮಳ ನಡವಳಿಕೆ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆರ್.ಆರ್. ನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರು ದಾಖಲಿಸಿಕೊಂಡು ಮನೆಗೆಲಸ ಮಾಡುತ್ತಿದ್ದ ಚಂದ್ರಮ್ಮನನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.