ಬೆಂಗಳೂರು: ವೋಗೋ ಕಂಪನಿಯ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂದನ್ (23) ಹಾಗೂ ವಿನಯ್ (22) ಬಂಧಿತರು.
ಆರೋಪಿ ನಂದನ್ ವೋಗೋ ಕಂಪನಿಯಲ್ಲಿ ಮೆಕ್ಯಾನಿಕ್ ವೃತ್ತಿ ಮಾಡಿಕೊಂಡಿದ್ದು ಎಂಟು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ. ಈತ ಕಂಪನಿಯ ಸ್ಕೂಟರ್ಗಳನ್ನು ನಿಲ್ಲಿಸುವ ಸ್ಥಳಗಳಿಗೆ ರಾತ್ರಿ ವೇಳೆ ತೆರಳಿ, ಅವುಗಳ ಜಿಪಿಎಸ್ ಡಿಸ್ಕನೆಕ್ಟ್ ಮಾಡಿ ಆರೋಪಿ ವಿನಯ್ಗೆ ನೀಡುತ್ತಿದ್ದ. ಸ್ಕೂಟರ್ಗಳನ್ನು ಪಡೆದ ವಿನಯ್, ವೋಗೋ ಕಂಪನಿ ಮುಚ್ಚುತ್ತಿದ್ದು, ತಾನು ಸ್ಕೂಟರ್ಗಳನ್ನು ಕೊಂಡಿರುವುದಾಗಿ ಸುಳ್ಳು ಹೇಳಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: 25 ಲಕ್ಷ ಮೌಲ್ಯದ 32 ಬೈಕ್ ಕಳ್ಳತನ: ಆನೇಕಲ್‌ನಲ್ಲಿ ಅಂತಾರಾಜ್ಯ ಕಳ್ಳನ ಬಂಧನ
ಈ ಕುರಿತು ಕಂಪನಿ ನೀಡಿದ ದೂರಿನನ್ವಯ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರ ತಂಡ, ಆರೋಪಿಗಳನ್ನು ಬಂಧಿಸಿ ದಾಖಲಾತಿಗಳಿಲ್ಲದೇ ಮಾರಾಟ ಮಾಡಿದ್ದ 55 ಲಕ್ಷ ರೂ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ.