ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದ ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ನಂತರ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ರಾಜ್ಯ ಬಿಜೆಪಿ ನಿಯೋಗ ರಾಜಭವನದ ಕದ ತಟ್ಟಿದೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ ಸಂಬಂಧ ಮಾತುಕತೆ ನಡೆಸಿದರು. 31 ವರ್ಷದ ಹಿಂದೆ ಪ್ರಕರಣಕ್ಕೆ ಉದ್ದೇಶಪೂರ್ವಕವಾಗಿ ಕೇಸ್ಗೆ ಸಂಬಂಧಿಸಿದಂತೆಇದೀಗ ಕೆಲವರನ್ನು ಬಂಧಿಸಲಾಗಿದೆ ಎನ್ನುವ ವಿವರಗಳನ್ನು ನೀಡಿದರು. ಪೊಲೀಸ್ ಕ್ರಮ ಹಾಗೂ ನಂತರದಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮಗಳ ವರದಿಗಳ ಜೊತೆಗೆ ರಾಜ್ಯಪಾಲರಿಗೆ ಮನವಿ ಪತ್ರ ನೀಡಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು.
ರಾಜ್ಯಪಾಲರ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ''ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ಕುರಿತು ನಾವು ರಾಜ್ಯಪಾಲರಿಗೆ ವಿವರ ನೀಡಿದ್ದೇವೆ. ತಕ್ಷಣ ರಾಜ್ಯ ಸರ್ಕಾರದಿಂದ ವಿವರವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಇಂದು ರಾಮಜಪ ನಡೆಯುತ್ತಿದೆ. ಜನವರಿ 22 ರಂದು ಲೋಕಾರ್ಪಣೆಯಾಗಲಿರುವ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾತರತೆಯ ವಾತಾವರಣವನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಡವಳಿಕೆ, ಸಿಎಂ, ಕಾಂಗ್ರೆಸ್ ಸರ್ಕಾರದ ನಡವಳಿಕೆ ಅನುಮಾನ ತರಿಸುತ್ತಿದೆ. ಹಿಂದೂ ವಿರೋಧಿ ನೀತಿ ಅಳವಡಿಸಿಕೊಂಡಿರುವ ಸರ್ಕಾರ ರಾಮ ಭಕ್ತರ ವಿರುದ್ಧ ಕ್ರಮದ ಹಿಂದೆ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಅಡಗಿದೆ. ಪೊಲೀಸರು ಕೂಡ ಸರ್ಕಾರದ ಜೊತೆ ಕೈಜೋಡಿಸಿರುವುದು ಸರಿಯಲ್ಲ. ರಾಜ್ಯಪಾಲರು ತಕ್ಷಣ ಈ ವಿಚಾರದಲ್ಲಿ ವಿವರವನ್ನು ತರಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದೇವೆ. ತಕ್ಷಣ ರಾಜ್ಯ ಸರ್ಕಾರದಿಂದ ಸವಿಸ್ತಾರವಾದ ವರದಿ ಪಡೆದುಕೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ'' ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್‍ಕುಮಾರ್, ಪ್ರೀತಮ್ ಗೌಡ, ನಂದೀಶ್ ರೆಡ್ಡಿ, ಪಿ.ರಾಜೀವ್, ಮಾಜಿ ಸಚಿವ ಮುನಿರತ್ನ, ಶಾಸಕರಾದ ಕೃಷ್ಣಪ್ಪ, ಚೆನ್ನಬಸಪ್ಪ, ಸುರೇಶ್, ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ನ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೆರೆ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು, ಮುಖಂಡರಾದ ಮರಿಸ್ವಾಮಿ, ಭಾಸ್ಕರ ರಾವ್, ಡಾ. ಸಂದೀಪ್, ತಮ್ಮೇಶ್ ಗೌಡ ನಿಯೋಗದಲ್ಲಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬೆಳಗಾವಿಯಲ್ಲೂ ಬಿಜೆಪಿ ಪ್ರತಿಭಟನೆ