ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ಹಾಗೂ ಗೂಂಡಾಗಿರಿ ಪ್ರದರ್ಶಿಸಿದ್ದ ಐವರು ಆಫ್ರಿಕಾ ಪ್ರಜೆಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಬಮಅರ್ಮಾನ್ ಗ್ವಾಯ್, ಕ್ಲೆಮೆಂಟ್ ಬಾರ್ಕೆಮ್ಡಾ, ಯೂಸುಫ್ ಮಕೇಟಾ, ಜುವಾನೆ ಮುಕುಂಜು, ಗುಲೊರ್ಗ್ ಬಂಧಿತರು. ಇವರು ವಿದ್ಯಾರ್ಥಿ ವೀಸಾದಡಿಯಲ್ಲಿ ಭಾರತಕ್ಕೆ ಬಂದಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಹಲ್ಲೆ, ಗೂಂಡಾಗಿರಿ ಸೇರಿದಂತೆ 14 ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕಾಂಗೋ ದೇಶದ ಪ್ರಜೆ ಜಾನ್ ಎಂಬಾತನನ್ನು ಡ್ರಗ್ಸ್ ಪ್ರಕರಣದಡಿ ಜೆ.ಸಿ.ನಗರ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಎದೆನೋವಿನಿಂದ ಮೃತಪಟ್ಟಿದ್ದಾನೆ. ಈ ವಿಷಯ ಅರಿತ ಆತನ ಸ್ನೇಹಿತರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಘರ್ಷಣೆಗೆ ಇಳಿದಿದ್ದ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದರು. ಘಟನೆಯ ಸತ್ಯಾಸತ್ಯತೆ ಅರಿಯಲು ಪೊಲೀಸ್ ಕಮೀಷನರ್ ಕಮಲ್ ಪಂತ್ ಸಿಐಡಿ ತನಿಖೆಗೆ ಆದೇಶಿಸಿದ್ದರು. ಈ ಬಗ್ಗೆ ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಸಹ ಮಾಹಿತಿ ನೀಡಿದ್ದರು.
ಪೊಲೀಸರ ಮುಂದಿದೆ ಹಲವು ಸವಾಲುಗಳು: ಕಾಂಗೋ ಪ್ರಜೆ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ ಹಿನ್ನೆಲೆಯಲ್ಲಿ ಎಸ್ಪಿ ವೆಂಕಟೇಶ್ ಮತ್ತು ಡಿಎಸ್‌ಪಿ ನಂದಕುಮಾರ್ ನೇತೃತ್ವದಲ್ಲಿ ಪ್ರಾಥಮಿಕ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದೆ. ಜೆ.ಸಿ.ನಗರ ಪೊಲೀಸರು ಕಾಂಗೋ ದೇಶದ ಪ್ರಜೆಯ ಬಂಧನ ಯಾವಾಗ, ಹೇಗೆ? ಅರೆಸ್ಟ್ ಆಗಿದ್ದಾಗಿನಿಂದ ಸಾವನ್ನಪ್ಪಿರುವವರೆಗೆ ಮತ್ತು ಠಾಣೆ ಮುಂದೆ ನಡೆದ ಗಲಾಟೆ ಹಾಗು ಲಾಠಿ ಚಾರ್ಜ್ ಬಗ್ಗೆ ತನಿಖೆ ನಡೆಸಿ ಈ ಬಗ್ಗೆ ಸಂಪೂರ್ಣ ವರದಿ ನೀಡಬೇಕಿದೆ.
ಪೊಲೀಸರ ಕ್ರಮ ಹಾಗು ಅಸಲಿಗೆ ನಡೆದಿದ್ದೇನು ಎಂಬುದರ ಬಗ್ಗೆ ಸಿಐಡಿ ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಮತ್ತೊಂದೆಡೆ, ರಾಜ್ಯ ಮಾನವ ಹಕ್ಕುಗಳ ಆಯೋಗ ಸಹ ಪ್ರತ್ಯೇಕ ತನಿಖೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಕಾಂಗೋ ದೇಶದ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಜೊತೆಗೆ ಸಂಪೂರ್ಣ ಘಟನೆ ಬಗ್ಗೆ ಪೊಲೀಸರಿಂದ ರಾಯಭಾರಿ ಕಚೇರಿಗೆ ವರದಿ ನೀಡಬೇಕಿದೆ.
ಆಫ್ರಿಕನ್ ಪ್ರಜೆಗಳ ಗಲಾಟೆ ಇದೇ ಮೊದಲಲ್ಲ: ಕ್ಷುಲ್ಲಕ ಕಾರಣಕ್ಕಾಗಿ ನಗರದಲ್ಲಿ ಹಲವು ಬಾರಿ ಆಫ್ರಿಕಾ ಪ್ರಜೆಗಳು ಗುಂಡಾವರ್ತನೆ ತೋರಿದ್ದಾರೆ. ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ಸ್ ಕೇಸ್‌ನಲ್ಲಿ ಭಾಗಿಯಾಗುತ್ತಿದ್ದು, ಕಳೆದೊಂದು ವರ್ಷದಲ್ಲಿ 96 ಆಫ್ರಿಕನ್ ಪ್ರಜೆಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಸ್ಟೂಡೆಂಟ್ ವೀಸಾದಡಿ ಬಹುತೇಕ ಆಫ್ರಿಕನ್ಗಳು ದೇಶಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲೇ ಅಕ್ರಮವಾಗಿ ಇವರು ನೆಲೆಸಿದ್ದಾರೆ. ಡ್ರಗ್ಸ್ ದಂಧೆ, ಸೈಬರ್ ಕ್ರೈಮ್ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಸದ್ಯ ಬಂಧಿತ ಆಫ್ರಿಕನ್ ಪ್ರಜೆಗಳು ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಲು ಪೊಲೀಸರು ಸಿದ್ದತೆ ನಡೆಸುತ್ತಿದ್ದು ಯಾವ ದೇಶದವರು? ಯಾವಾಗ ಭಾರತಕ್ಕೆ ಆಗಮಿಸಿದ್ರು? ವೀಸಾ ಅವಧಿ ಮುಗಿದಿದೆಯಾ? ಯಾವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ ಎಲ್ಲದರ ಬಗ್ಗೆಯೂ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.
ವಿದೇಶಿಗರಿಗೆ ಮನೆ ಬಾಡಿಗೆ ಕೊಡುವ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹಲವು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹೆಚ್ಚಿನ ಬಾಡಿಗೆ ಹಣಕ್ಕಾಗಿ ಬಾಡಿಗೆದಾರರು ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ.
ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ನೀಡುವ ಮುನ್ನ ಬಾಡಿಗೆದಾರರ ಮಾಹಿತಿ ದಾಖಲಾತಿ ಸಹಿತ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆ ಮಾಲೀಕ ಮಾಹಿತಿ ನೀಡದ ವ್ಯಕ್ತಿಗಳು ಅಕ್ರಮವಾಗಿ ನೆಲೆಸಿದ್ದಲ್ಲಿ ಅಥವಾ ಕ್ರೈಂ ನಲ್ಲಿ ಭಾಗಿಯಾಗಿ ಅರೆಸ್ಟ್ ಆದರೆ ಮನೆ ಮಾಲಿಕ ಸಹ ಬಂಧನವಾಗುವುದು ಖಚಿತವಾಗಲಿದೆ.
ನಾಪತ್ತೆಯಾದವರಿಗಾಗಿ ಹುಡುಕಾಟ: ಪೊಲೀಸರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿ ತೀವ್ರ ಹುಡುಕಾಟ ನಡೆಯುತ್ತಿದೆ. ಕೊತ್ತನೂರು, ಹೆಣ್ಣೂರು, ಬಾಣಸವಾಡಿ, ಆರ್.ಟಿ ನಗರ, ರಾಮಮೂರ್ತಿನಗರ ಮತ್ತು ಟಿ.ಸಿ ಪಾಳ್ಯದಲ್ಲಿ ಶೋಧ ನಡೆಯುತ್ತಿದೆ. ಸಿಸಿಟಿವಿ ಮತ್ತು ಪೊಲೀಸರ ಹ್ಯಾಂಡಿಕ್ಯಾಮ್‌ನಲ್ಲಿ ಶೂಟ್ ಆದ ದೃಶ್ಯಗಳನ್ನು ಆಧರಿಸಿ ಹುಡುಕಾಟ ನಡೆಸಲಾಗುತ್ತಿದೆ. ಗಲಭೆಗೆ ಪ್ರಚೋದನೆ ನೀಡಿದ್ದ ಸ್ಥಳೀಯ ಮಹಿಳೆ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಶವ ಹಸ್ತಾಂತರ: ಮೃತಪಟ್ಟಿರುವ ಜಾಯಲ್ ಮಲುವಿನ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಪರೀಕ್ಷೆ ಬಳಿಕ ಯಾರಿಗೆ ಶವ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರವಾಗಬೇಕಿದೆ. ಈಗಾಗಲೇ ಮೃತನ ಸಂಬಂಧಿಕರ ಬಗ್ಗೆ ರಾಯಭಾರಿ ಕಚೇರಿ ಮೂಲಕ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಂತರ ಮೃತನ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಬೇಕಾ ಅಥವಾ ರಾಯಭಾರಿ ಕಛೇರಿಗೆ ಹಸ್ತಾಂತರಿಸಬೇಕಾ ಎಂಬುದರ ಬಗ್ಗೆ ತೀರ್ಮಾನವಾಗಬೇಕಿದೆ. ಸದ್ಯ ಬೌರಿಂಗ್‌ನಲ್ಲಿ ಜಾಯಲ್ ಮಲು ಶವವಿದೆ.