ಬೆಂಗಳೂರು: ಏರಿಯಾದಲ್ಲಿ ಫೇಮಸ್ ಆಗಲು ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳಿಗೆ ಹೊಡೆದು ಹಾನಿಗೊಳಿಸುತ್ತಿದ್ದ ಐವರು ಕಿಡಿಗೇಡಿಗಳನ್ನ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಲಗ್ಗೆರೆ ನಿವಾಸಿಗಳಾದ ಮಣಿಕಂಠ, ಸೋಮ, ಲೊಕೇಶ್, ಕಾರ್ತಿಕ ಹಾಗೂ ಡ್ಯಾನಿಯಲ್ ಎಂಬುವರನ್ನ ಬಂಧಿಸಲಾಗಿದೆ.
ಕಳೆದ ನ.11ರಂದು ಲಗ್ಗೆರೆಯ ರಾಜೀವ್ ಗಾಂಧಿ ನಗರದಲ್ಲಿ ಸಾರ್ವಜನಿಕರು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನ ಗುರಿಯಾಗಿಸಿಕೊಂಡು ಲಾಂಗ್ ಹಾಗೂ ಕಬ್ಬಿಣದ ರಾಡ್ಗಳಿಂದ ಸುಮಾರು 10 ಕಾರುಗಳು, 2 ಆಟೊ ಹಾಗೂ ಒಂದು ಕ್ಯಾಂಟರ್ ಸೇರಿ ಒಟ್ಟು 13 ವಾಹನಗಳ ಗಾಜಿಗೆ ಹೊಡೆದು ಹಾನಿಗೊಳಿಸಿ ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು.
ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಪುನೀತ್ ನೇತೃತ್ವದ ತಂಡ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಏರಿಯಾದಲ್ಲಿ ಪಾರುಪಾತ್ಯ ಮೆರೆಯಲು ಪುಂಡಾಟ: ಬಂಧಿತರಾದ ಐವರು ಆರೋಪಿಗಳಲ್ಲಿ ಇಬ್ಬರ ವಿರುದ್ದ ಗಂಗಮ್ಮನಗುಡಿ, ಮಹಾಲಕ್ಷ್ಮೀ ಲೇಔಟ್ ಅನ್ನಪೂರ್ಣೇಶ್ವರಿ ನಗರ, ಕುಣಿಗಲ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ದೂರು ದಾಖಲಾಗಿವೆ. ಆರೋಪಿಗಳೆಲ್ಲರೂ ಪರಸ್ಪರ ಸ್ನೇಹಿತರಾಗಿದ್ದು, ಏರಿಯಾದಲ್ಲಿ ಹವಾ ಸೃಷ್ಟಿಸಿ ಫೇಮಸ್ ಆಗಲು ದೃಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನ ಗುರಿಯಾಗಿಸಿ ಕಿಡಿಗೇಡಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲಾ ಅಡಾವತ್ ತಿಳಿಸಿದ್ದಾರೆ.
ಗೊಂಬೆ ಮುಖವಾಡ ಧರಿಸಿ ಕೃತ್ಯ: ಕಿಡಿಗೇಡಿ ಕೃತ್ಯಗಳನ್ನ ನಡೆಸುವಾಗ ತಮ್ಮ ಮುಖ ಚಹರೆ ಗೊತ್ತಾಗದಂತೆ ತಿಳಿಯಲು ಆರೋಪಿಗಳು ಗೊಂಬೆ ಮುಖವಾಡ ಧರಿಸುತ್ತಿದ್ದರು. ವಾಹನ ಹಾನಿಗೊಳಿಸುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹಿಣಿ ಕೊಲೆ: ಮೈಸೂರು ಜಿಲ್ಲೆಯಲ್ಲಿ ಗೃಹಿಣಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿತ್ತು. ಇಲ್ಲಿಯ ಕುವೆಂಪು ನಗರದ ಜ್ಯೋತಿ ಕಾನ್ವೆಂಟ್ ಬಳಿ ಮಂಜುಳಾ (41) ಎಂಬುವವರ ಕೊಲೆ ಮಾಡಲಾಗಿದೆ. ಶಾಲೆಗೆ ತೆರಳಿದ್ದ ಮಗಳು ಮನೆಗೆ ಹಿಂದಿರುಗಿದಾಗ ಕೃತ್ಯ ಬೆಳಕಿಗೆ ಬಂದಿದೆ. ಹೆಚ್.ಡಿ.ಕೋಟೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿರುವ ನಾಗರಾಜ್ ಎಂಬವರ ಪತ್ನಿ ಮಂಜುಳಾ ಅವರ ಕುತ್ತಿಗೆಗೆ ಸ್ಕಾರ್ಫ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಇದನ್ನೂ ಓದಿ: ಬಟ್ಟೆ ಅಂಗಡಿಗೆ ನುಗ್ಗಿ ಸಾವಿರಾರು ರೂ. ಕದ್ದ ಕಳ್ಳ; ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕೈಚಳಕ