ಬೆಂಗಳೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೇಲುವ ಚಿನ್ನ ಎಂದು ಖ್ಯಾತಿ ಪಡೆದಿರುವ 20 ಕೋಟಿ ರೂ.ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಲ್ವರ್ ಜ್ಯೂಬಿಲಿ ಪಾರ್ಕ್ ಪೊಲೀಸರು ಬಯಲಿಗೆಳೆದಿದ್ದಾರೆ.
ಹೊಸಕೋಟೆ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರಾಜ್ಯ ಸರ್ಕಾರ ಆದೇಶದಂತೆ ಆರೋಪಿಗಳ ಹೆಸರು ನೀಡಲು ನಿರಾಕರಿಸಿದ್ದಾರೆ. ಇಂದು ಬೆಳಗ್ಗೆ ಎನ್.ಆರ್.ರಸ್ತೆಯಲ್ಲಿರುವ ಲೂಸಿಯಾ ಲಾಡ್ಜ್ನಲ್ಲಿ ಅಂಬರ್ ಗ್ರೀಸ್ ಗಟ್ಟಿ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 2.5 ಕೆ.ಜಿ ಅಂಬರ್ ಗ್ರೀಸ್ ವಶಕ್ಕೆ ಪಡೆದು ಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನೀಡಿದ ಮಾಹಿತಿ ಮೇರೆಗೆ ಹೊಸಕೋಟೆ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ 17.5 ಕೆ.ಜಿ. ಅಂಬರ್ ಗ್ರಿಸ್ ಜಪ್ತಿ ಮಾಡಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 20 ಕೋಟಿಯಾಗಲಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ತಿಮಿಂಗಲದ ವಾಂತಿ ಘನ ರೂಪವಾಗಿ ಪರಿವರ್ತನೆಯಾಗುವುದನ್ನೇ ಅಂಬರ್ ಗ್ರೀಸ್ ಎನ್ನುತ್ತಾರೆ. ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸುಗಂಧ ದ್ರವ್ಯಕ್ಕಾಗಿ ಇದನ್ನು ಬಳಸುತ್ತಾರೆ. ಒಂದು ಕೆ.ಜಿ.ಗೆ ಸುಮಾರು 1 ಕೋಟಿಗಿಂತ ಹೆಚ್ಚು ಮೌಲ್ಯ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವು ಈ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ.
ಬಂಧಿತ ಆರೋಪಿಗಳು ಉಡುಪಿ ಮಲ್ಪೆ ಬೀಚ್ ನಲ್ಲಿ ಅಂಬರ್ ಗ್ರೀಸ್ ಗಟ್ಟಿಯನ್ನು ಸಂಗ್ರಹಿಸಿಕೊಂಡು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರಕ್ಕೆ ತಂದು ಮಾರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.