ಬೆಂಗಳೂರು: ಟೆಲಿಗ್ರಾಮ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು ಸ್ನೇಹದಿಂದ ವರ್ತಿಸಿ ಯುವತಿ ಮಂದಿಟ್ಟು ಹನಿಟ್ರ್ಯಾಪ್ ದಾಳಕ್ಕೆ ಉರುಳಿಸುತ್ತಿದ್ದ ಮೂವರನ್ನು ಪುಟ್ಟೇನಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಯುವಕನನ್ನು ಜೆ.ಪಿ. ನಗರದ ವಿನಾಯಕ್ ನಗರಕ್ಕೆ ಕರೆಯಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬೆದರಿಸಿ 50 ಸಾವಿರ ಸುಲಿಗೆ ಮಾಡಿರುವುದಾಗಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳಾದ ಶರಣಪ್ರಕಾಶ್ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಬಂಧಿಸಲಾಗಿದೆ. ಯುವತಿ ಸೇರಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮುಖಾಂತರ ಮಹಿಳಾ ಆರೋಪಿತೆ ಯುವಕರನ್ನು ಪರಿಚಯಿಸಿಕೊಂಡು ಅವರ ಬಲಹೀನತೆ ಅರಿತು ತನ್ನ ಬಲೆಗೆ ಬೀಳಿಸಿಕೊಂಡು ಜೆ.ಪಿ.ನಗರದ ಐದನೇ ಹಂತದಲ್ಲಿರುವ ವಿನಾಯಕ್ ನಗರದ ಮನೆಯೊಂದಕ್ಕೆ ಕರೆಯಿಸಿಕೊಳ್ಳುತ್ತಿದ್ದರು. ಇವರು ಹಿಂದೆ ಆರೋಪಿಗಳ ಗ್ಯಾಂಗ್ ಕೆಲಸ ಮಾಡುತಿತ್ತು. ಕಳೆದ ಎರಡು ತಿಂಗಳ ಹಿಂದೆ ದೂರುದಾರರನ್ನು ಮನೆಗೆ ಕರೆಯಿಸಿಕೊಂಡಿದ್ದರು.
ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು. ಕೆಲ ಕ್ಷಣಗಳ ಬಳಿಕ ಪೂರ್ವಸಂಚಿನಂತೆ ಮನೆಗೆ ನುಗ್ಗಿ ಆತನ ಮೊಬೈಲ್ ಕಸಿದು ನಾಲ್ವರ ಗ್ಯಾಂಗ್ ಪ್ರಶ್ನಿಸುತಿತ್ತು. ಅನ್ಯ ಧರ್ಮದ ಯುವತಿಯಾಗಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್ನಲ್ಲಿ ಫೋಟೋ - ವಿಡಿಯೋ ಸೆರೆಹಿಡಿಯುತಿದ್ದರು.
ದೂರುದಾರನ ಕಸಿದಿದ್ದ ಮೊಬೈಲ್ನ ಕಾಂಟಾಕ್ಟ್ ಲಿಸ್ಟ್ ಪಟ್ಟಿ ಮಾಡಿಕೊಂಡು ಕೇಳಿದಷ್ಟು ಹಣ ಕೊಡದಿದ್ದರೆ ಕುಟುಂಬಸ್ಥರಿಗೆ ಕಳುಹಿಸಿ ಮಾನ - ಮಾರ್ಯಾದೆ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು. ಮುಸಲ್ಮಾನ ಸಮುದಾಯ ಯುವತಿಯಾಗಿದ್ದು, ಆಕೆಯೊಂದಿಗೆ ಮದುವೆಯಾಗಬೇಕಾದರೆ ಸಂಪ್ರದಾಯದಂತೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು.
ಮಾರ್ಯಾದೆಗೆ ಅಂಜಿ ನೊಂದ ಯುವಕ ಆರೋಪಿತರ ಬ್ಯಾಂಕ್ ಅಕೌಂಟ್ಗೆ ದುಡ್ಡು ಹಾಕಿದ್ದ. ಹಣ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ನಿರಂತರ ಕಾರ್ಯಾಚರಣೆ ಬಳಿಕ ಮೂವರನ್ನು ಬಂಧಿಸಲಾಗಿದೆ. ಸುಮಾರು 30 ಲಕ್ಷ ಹಣದವರೆಗೆ ನೊಂದವರಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದೇ ತರಹ ಹತ್ತಾರು ಮಂದಿಗಳಿಗೆ ಗ್ಯಾಂಗ್ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿತ್ತು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ. ಇದರಿಂದಾದರು ಜನತೆ ಸೋಷಿಯಲ್ ಮೀಡಿಯಾದಿಂದ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದರೆ ದುರಾಸೆಯ ಬಲೆಗೆ ಬಿದ್ದು ಜೀವನ ಸಮಸ್ಯೆ ಸುಳಿಯಲ್ಲಿ ಸಿಲುಕಬಹುದು.
ಇದನ್ನೂ ಓದಿ: Honeytrap: ಮಂಗಳೂರಿನಲ್ಲಿ ಕೇರಳ ಉದ್ಯಮಿಯ ಹನಿಟ್ರ್ಯಾಪ್: ಯುವತಿ ಸಹಿತ 8 ಮಂದಿ ಬಂಧನ