ಬೆಂಗಳೂರು: ವ್ಯಕ್ತಿಯೊಬ್ಬರಿಗೆ ನೀವು ಕಳುಹಿಸಿರುವ ಕೊರಿಯರ್ ಪಾರ್ಸೆಲ್ನಲ್ಲಿ ಡ್ರಗ್ಸ್ ಇದೆ ಎಂದು ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಬೆದರಿಸಿ, ಹಂತ-ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದ 8 ಮಂದಿ ಸೈಬರ್ ವಂಚಕರನ್ನು ನಗರದ ಉತ್ತರ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ವಾಸಿಂ, ಹಬ್ಬಿಬುಲಾ, ನಿಜಾಮುದ್ದೀನ್, ಮುಷರಫ್ ಖಾನ್, ಬೆಂಗಳೂರಿನ ನೂರುಲ್ಲಾ ಖಾನ್, ಮೊಹಮ್ಮದ್ ಉಮರ್, ಸೈಯದ್ ಅಹ್ಮದ್ ಹಾಗೂ ಸೈಯ್ಯದ್ ಹುಸೇನ್ ಬಂಧಿತರು.
ಮಲ್ಲೇಶ್ವರದ ನಟರಾಜ್ ಬಿ.ಎಸ್.ರಾವ್ ಎಂಬುವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಎಸ್.ಶಿವರತ್ನ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿ, 13 ಲಕ್ಷ ಹಣ ವಶಪಡಿಸಿಕೊಂಡು ವಿವಿಧ ಬ್ಯಾಂಕ್ ಖಾತೆಯಲ್ಲಿದ್ದ 19 ಲಕ್ಷ ಹಣವನ್ನು ಫ್ರೀಜ್ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ ಫೋನ್, 148 ಬೇನಾಮಿ ಬ್ಯಾಂಕ್ ಖಾತೆಗಳನ್ನ ಜಪ್ತಿ ಮಾಡಲಾಗಿದೆ. ಜೊತೆಗೆ 4500 ಯುಎಸ್ ಡಾಲರ್ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೇಗೆ ಮಾಡಿದ್ರು ವಂಚನೆ?: ಕಳೆದ ನವೆಂಬರ್ 10ರಂದು ನಟರಾಜ್ ಅವರಿಗೆ ವಾಟ್ಸ್ಆ್ಯಪ್ ಕರೆ ಮಾಡಿದ ಆರೋಪಿಗಳು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು ತಮ್ಮ ಪತ್ನಿ ಹೆಸರಿನಲ್ಲಿ ಮುಂಬೈನಿಂದ ಥಾಯ್ಲೆಂಡ್ಗೆ ಕಳುಹಿಸುವ ಫೆಡಕ್ಸ್ ಕೊರಿಯರ್ ಪಾರ್ಸಲ್ನಲ್ಲಿ 140 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ. ಅಲ್ಲದೇ ಹಲವು ಬ್ಯಾಂಕ್ ಖಾತೆಗಳನ್ನ ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ. ತನಿಖೆ ಮುಗಿಯುವವರೆಗೂ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಒಪ್ಪಿಸಬೇಕಿದೆ. ತನಿಖೆ ಬಳಿಕ ಹಣ ನಿಮ್ಮ ಖಾತೆಗೆ ಜಮೆ ಮಾಡಲಾಗುವುದು ಎಂದು ನಂಬಿಸಿ ಒಟ್ಟು 1.08 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ ಮಾಹಿತಿ ಮೇರೆಗೆ ಎಂಟು ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ. ದಾವಣಗೆರೆ ಹಾಗೂ ಬೆಂಗಳೂರು ಮೂಲದ ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸೈಬರ್ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವ್ಯವಸ್ಥಿತವಾಗಿ ಸಂಚು ರೂಪಿಸಿ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಕೊರಿಯರ್ ಪಾರ್ಸಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಅಮಾಯಕರನ್ನು ಯಾಮಾರಿಸುತ್ತಿದ್ದರು.
ಇವರು ಅಮಾಯಕರಿಗೆ ಹಣ ನೀಡಿ ಅವರ ಹೆಸರಿನಲ್ಲಿ ಬೇನಾಮಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ವರ್ಗಾಯಿಸಿಕೊಂಡಿದ್ದ 1.08 ಕೋಟಿ ಪೈಕಿ ದಾವಣಗೆರೆಯ ಆರ್.ಬಿಎಲ್ ಬ್ಯಾಂಕ್ ನಿಂದ ಆರೋಪಿಗಳು 9.34 ಲಕ್ಷ ರೂಪಾಯಿ ಹಣ ವಿತ್ ಡ್ರಾ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ವಂಚಕರನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಬಂಧನದಿಂದ 72 ಪ್ರಕರಣಗಳು ಪತ್ತೆ: ವಾಟ್ಸ್ಆ್ಯಪ್ ಆಡಿಯೋ ಕರೆ ಮಾಡಿದ ಆರೋಪಿಗಳು, ಸಾರ್ವಜನಿಕರಿಂದ ವರ್ಗಾಯಿಸಿಕೊಂಡಿದ್ದ 1.08 ಕೋಟಿ ಹಣವನ್ನು ಕೆಲವೇ ಗಂಟೆಗಳಲ್ಲಿ 72 ಬೇನಾಮಿ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆರು ಗಂಟೆಗಳ ವಾಟ್ಸಾಆ್ಯಪ್ ಕರೆ ಮಾಡಿ ಪ್ರಕರಣದ ದೂರುದಾರರ ನಟರಾಜ್ ನಂಬಿಸಿ ಯಾಮಾರಿಸಿದ್ದರು. ಆರೋಪಿಗಳ ಬಂಧನದಿಂದ ರಾಷ್ಟ್ರೀಯ ಅಪರಾಧ ಸಂಗ್ರಹ ಘಟಕದಲ್ಲಿ (ಎನ್ಸಿಆರ್ಬಿ) ದಾಖಲಾಗಿದ್ದ 72 ಸೈಬರ್ ವಂಚನೆ ಪ್ರಕರಣಗಳು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹಣದ ಆಸೆಗಾಗಿ ಲೈಕ್, ಶೇರ್ ಮಾಡ್ತೀರಾ, ಹಾಗಿದ್ರೆ ಹುಷಾರ್!