ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ಜಯಮಹಲ್ನಲ್ಲಿರುವ ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮಾತುಕತೆ ನಡೆಸಲು ರಮೇಶ್ ಜಾರಕಿಹೊಳಿ ಬಂದಿದ್ದರು. ಸಾಕಷ್ಟು ಮಾಹಿತಿ ನೀಡಿ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ಕೊಡಬೇಕೋ ಬೇಡವೋ ಎನ್ನುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಂತರವೇ ನಿರ್ಧರಿಸಲಾಗುತ್ತದೆ ಎಂದರು.
ಯಾರೇ ಆಗಲಿ ಸಿಡಿ ಮೂಲಕ ಯಾರನ್ನಾದರೂ ತೇಜೋವಧೆ ಮಾಡುವುದು ತಪ್ಪು. ಯಾರೂ ಕೂಡ ಯಾರದೇ ತೇಜೋವಧೆ ಮಾಡಬಾರದು. ಒಂದು ವೇಳೆ ಆ ರೀತಿ ಮಾಡಹೊರಟರೆ ಪೊಲೀಸರು ಖಂಡಿತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಇದೇ ವೇಳೆ ಸಚಿವರು ಎಚ್ಚರಿಸಿದರು.
ಸ್ಯಾಂಟ್ರೋ ರವಿ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯ ವರ್ಗಾವಣೆಯಾಗಿದೆ. ಆದರೆ, ಅವರು ಸ್ಯಾಂಟ್ರೋ ರವಿ ಪ್ರಕರಣದ ಐಒ ಎನ್ನುವ ಕಾರಣಕ್ಕೆ ವರ್ಗಾವಣೆಯಾಗಿದ್ದಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಶಿಕ್ಷಣ ಇಲಾಖೆ ಲೋಕೇಶ್ ತಾಳಿಕಟ್ಟೆ ಅವರ ಮೇಲೆ ದಾಖಲಿಸಿರುವ ಎಫ್ಐಆರ್ ವಿಚಾರದಲ್ಲಿ ತನಿಖೆ ನಡೆಯುತ್ತಿದ್ದು ನಂತರ ಸತ್ಯ ಹೊರಬರಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೂಲಮಂತ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಪರಿಕಲ್ಪನೆಯನ್ನು ಸಾಕಾರಗೊಳಿಸುವ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ರಾಜ್ಯದ ದೃಷ್ಟಿಯಿಂದ ಅತ್ಯಂತ ಮಹತ್ವ ಹೊಂದಿರುವ ಬಜೆಟ್ನಲ್ಲಿ, ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸುಮಾರು 5,300 ಕೋಟಿ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದ್ದು, ಅತ್ಯಂತ ಸ್ವಾಗತಾರ್ಹ. ಸಮಾಜದ ಎಲ್ಲಾ ವರ್ಗದ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟು ಮಂಡಿಸಿದ ಬಜೆಟ್ನಲ್ಲಿ ಸಾಮಾಜಿಕ ಮೂಲ ಸೌಕರ್ಯ ಅಭಿವೃದ್ಧಿ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕೋವಿಡ್ ಮಹಾಮಾರಿಯಿಂದ ಬಾಧಿತವಾದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ, ಆರ್ಥಿಕ ಚೈತನ್ಯ ನೀಡುವ ಪ್ರಸ್ತಾವನೆ, ಹೊಸ ಭರವಸೆ ಮೂಡಿಸಲಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ, ದೇಶದ ರೈಲ್ವೆ ವಲಯಕ್ಕೆ, ಅತ್ಯಂತ ದೊಡ್ಡ ಮೊತ್ತವಾದ 2.41 ಲಕ್ಷ ಕೋಟಿ ರೂಪಾಯಿಗಳ ಅನುದಾನ ಘೋಷಿಸಿದ್ದು, ಇದು ದೇಶದ ಸಂಪರ್ಕ ವ್ಯವಸ್ಥೆ ಇನ್ನಷ್ಟು ಬಲ ಪಡೆಯಲು ಸಹಾಯವಾಗುತ್ತದೆ. ದೇಶದ ಬಡ ಹಾಗೂ ದಲಿತ ವರ್ಗದ ನಾಗರಿಕರಿಗೆ, ಅನುಕೂಲ ಕಲ್ಪಿಸುವ ಉದ್ದೇಶದಿಂದ, ಉಚಿತವಾಗಿ ವಿತರಿಸಲಾಗುವ ಆಹಾರಧಾನ್ಯ ಪೂರೈಕೆಯನ್ನು ಮುಂದಿನ ಎರಡು ವರ್ಷಗಳವರೆಗೆ ವಿಸ್ತರಿಸುವ ನಿರ್ಧಾರ ಅತ್ಯಂತ ಸಕಾಲಿಕ. ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದು, ರೈತ ಸಮುದಾಯದ ಅಭಿವೃದ್ದಿಗೆ ಸಹಾಯಕವಾಗಲಿದೆ ಎಂದರು.
ಗ್ರಾಮೀಣ ಪ್ರದೇಶದ ಹಾಗೂ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದ್ದು, ದೇಶದ ಸರ್ವತೋಮುಖ ಅಭಿವೃದ್ದಿಗೆ ಬಜೆಟ್ ಪೂರಕವಾಗಿ ನೆರವಾಗಲಿದೆ. ಅದೇ ರೀತಿ ರಾಜ್ಯದಲ್ಲಿಯೂ ಬಜೆಟ್ ಬರುತ್ತಿದೆ. ಬಸವರಾಜ ಬೊಮ್ಮಾಯಿ ರಾಜ್ಯವನ್ನು ಎರಡು ಬಾರಿ ರಾಜ್ಯ ಸುತ್ತಿದ್ದಾರೆ. ಜನರ ಅಹವಾಲು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತಮವಾದ ಬಜೆಟ್ ಮಂಡಿಸಲಿದ್ದಾರೆ. ಬೊಮ್ಮಾಯಿ ಅಧ್ಯಯನ ನಡೆಸಿ ಯಾವಾಗಲು ನಿರ್ಧಾರ ತೆಗೆದುಕೊಳ್ಳುವ ಸಿಎಂ. ಖಂಡಿತವಾಗಿ ಎಲ್ಲ ಸಮುದಾಯಕ್ಕೆ ಒಳ್ಳೆಯದಾಗುವ ರೀತಿ ಬಜೆಟ್ ನೀಡಲಿದ್ದಾರೆ. ಆರ್ಥಿಕ ಶಿಸ್ತು ಪರಿಗಣಿಸಿ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ ನಗರ ಕ್ಷೇತ್ರದಿಂದಲೇ ಸ್ಪರ್ಧೆ ಎಂದ ಸೋಮಶೇಖರ್ ರೆಡ್ಡಿ.. ಕುಟುಂಬದೊಳಗೇ ಶುರುವಾಯ್ತು ಜಿದ್ದಾಜಿದ್ದಿ