ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಣೆಯನ್ನು ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ವಹಿಸಿಕೊಳ್ಳಲಿದ್ದು, ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಹೊಸ ಅಧ್ಯಕ್ಷರ ನೇಮಕದವರೆಗೂ ಸುನೀಲ್ ಕುಮಾರ್ ಸಾರಥ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುನ್ನಡೆಯಲಿದೆ.
ಕನ್ನಡ ಸಂಸ್ಕೃತಿ ಇಲಾಖೆಯ ಅಧೀನದಲ್ಲಿ ಬರುವ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರು 3 ವರ್ಷಗಳ ಅಧಿಕಾರವಧಿ 2022ರ ಅಕ್ಟೋಬರ್ 15ರಂದು ಪೂರ್ಣಗೊಂಡಿದ್ದು, ಸರ್ಕಾರ ಇನ್ನೂ ಹೊಸಬರ ನೇಮಕ ಮಾಡಿಲ್ಲ. ವಿವಿಧ ನಿಗಮ ಮಂಡಳಿಗಳ ಜೊತೆಗೆ ಅಕಾಡೆಮಿ ಮತ್ತು ಪ್ರಾಧಿಕಾರಗಳ ನೇಮಕವೂ ಬಾಕಿ ಉಳಿದುಕೊಂಡಿದೆ. ಹಾಗಾಗಿ ಹೊಸಬರು ಆಯ್ಕೆ ಆಗುವವರೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಲಾಗಿದ್ದು, ಅವರೇ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪೈಪೋಟಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಲ್ಲಿ ಯಾವಾಗಲೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಪೈಪೋಟಿ ಇದೆ. ಈ ಬಾರಿಯೂ ಖಾಲಿ ಇರುವ ಈ ಸ್ಥಾನಕ್ಕೆ ಹಂಗಾಮಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದು, ಹೊಸಬರ ಆಯ್ಕೆವರೆಗೂ ಕಾರ್ಯಭಾರ ಮಾಡಲಿದ್ದಾರೆ.
ನಿರ್ಗಮಿತ ಅಧ್ಯಕ್ಷ ಟಿ.ಎಸ್.ನಾಗಾಭರಣ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಸಿಎಂ ಸದ್ಯಕ್ಕೆ ಯಾವುದೇ ಭರವಸೆ ನೀಡಿಲ್ಲ. ಪಕ್ಷದಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಳವಿಕಾ ಅವಿನಾಶ್ ಈ ಬಾರಿಯ ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿದ್ದು, ಅವಕಾಶ ಕಲ್ಪಿಸಲು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ದೆಹಲಿ ಭೇಟಿ ನಂತರ ನೇಮಕ ಸಾಧ್ಯತೆ : ಇವರ ಜೊತೆ ಸಾಹಿತಿ ದೊಡ್ಡರಂಗೇಗೌಡರ ಹೆಸರೂ ಚಾಲ್ತಿಯಲ್ಲಿದೆ. ಕಳೆದ ಬಾರಿ ಚರ್ಚೆಗೆ ಬಂದು ಅವಕಾಶ ವಂಚಿತರಾಗಿದ್ದ ದೊಡ್ಡರಂಗೇಗೌಡರ ಪರ ಸಿಎಂ ಒಲವಿದೆ ಎನ್ನಲಾಗುತ್ತಿದೆ. ಆದರೆ, ಸದ್ಯಕ್ಕೆ ಯಾವುದೇ ಹೆಸರು ಇನ್ನು ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವಾರ ನವದೆಹಲಿಗೆ ತೆರಳುವ ಸಾಧ್ಯತೆ ಇದ್ದು, ದೆಹಲಿ ಭೇಟಿ ನಂತರ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕದ ಕುರಿತು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಲಾಖೆ ಜಂಟಿ ನಿರ್ದೇಶಕರಿಗೆ ಹೊಣೆ : ಕರ್ನಾಟಕ ನಾಟಕ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ (ಬೆಂಗಳೂರು) ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಬಲವಂತರಾವ್ ಪಾಟೀಲ್ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ (ಮಡಿಕೇರಿ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ (ಮಡಿಕೇರಿ), ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ (ಮಂಗಳೂರು), ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ( ಮಂಗಳೂರು) ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ (ಮಂಗಳೂರು)ಗೆ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಅಶೋಕ್ ಎನ್. ಚಲವಾದಿ, ಕರ್ನಾಟಕ ಬಯಲಾಟ ಅಕಾಡೆಮಿ (ಬಾಗಲಕೋಟೆ)ಗೆ ಬಸವರಾಜ್ ಹೂಗಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಬನಶಂಕರಿ ವಿ. ಅಂಗಡಿ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಅಕಾಡೆಮಿ ಸಲಹಾ ಸಮಿತಿ ಮುಂದುವರಿಕೆ : ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಬಿ.ವಿ. ವಸಂತಕುಮಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಿ. ಮಹೇಂದ್ರ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಪೊ. ಆರ್. ಭೀಮಸೇನ್ ಹಾಗೂ ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾಗಿದ್ದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಮುಂದುವರೆಸಲಾಗಿದೆ.
ಇದನ್ನೂ ಓದಿ : ಸಿಬ್ಬಂದಿಗೆ ಭರ್ಜರಿ ವಿಮಾ ಯೋಜನೆ ಜಾರಿಗೊಳಿಸಿದ KSRTC: ಅಪಘಾತದಲ್ಲಿ ಮೃತಪಟ್ಟರೆ 50 ಲಕ್ಷ ಪರಿಹಾರ!