ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಸಚಿವ ಆರ್ ಅಶೋಕ್, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ರೈತರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದರು.
ಈಗಾಗಲೇ ಕಾಫಿ ಬೆಳೆಗಾರರೊಂದಿಗೆ ನಾಲ್ಕೈದು ಸಭೆ ನಡೆಸಿ ಅವರ ಅಗತ್ಯ ಏನು ಎನ್ನುವುದನ್ನು ತಿಳಿದಿದ್ದೇನೆ. ಎಲ್ಲ ಕಡೆ ಪ್ರವಾಸ ಮಾಡಿ ತಿಳಿದುಕೊಂಡಿದ್ದೇನೆ ಎಂದು ಹೇಳಿದರು. ಕಳೆದ 30-35 ವರ್ಷಗಳಿಂದ ದುಡಿಯುತ್ತಿದ್ದವರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇನೆ, ಸರ್ಕಾರ ಸದಾ ನಿಮ್ಮ ಜೊತೆ ಇದೆ. ಕಾಫಿ ಬೆಳೆಗಾರರ ಎಲ್ಲಾ ಸಮಸ್ಯೆಗಳಿಗೂ ಸದ್ಯದಲ್ಲೇ ಪರಿಹಾರ ನೀಡಲಾಗುವುದು. ಗೋಮಾಳದ ಜಾಗವನ್ನು ಲೀಸ್ ಕೊಡುವ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಯಾವ ರೀತಿ ನೀಡಬೇಕು ಎನ್ನುವುದನ್ನು ಅಂತಿಮಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಮಾತನಾಡಿ ಸಚಿವರು ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ್ದಾರೆ. ಕಾಫಿ ಬೆಳೆ ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ತಂದುಕೊಡುತ್ತದೆ. ಹಿಂದೆ ಕಾಫಿ ಬೋರ್ಡ್ ಇದ್ದಾಗ ಕಾಫಿ ಬೆಳೆಗೆ ಹೆಚ್ಚು ಒತ್ತು ನೀಡಿದ್ದರು. ಬೆಳಗಾವಿ ಅಧಿವೇಶನದಲ್ಲಿ ಕಾಫಿ ಬೆಳೆಗಾರರರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮೊದಲು ರೈತರ ವಿರುದ್ಧ ಗ್ರಾಬಿಂಗ್ ಕೇಸ್ ಹಾಕುತ್ತಿದ್ದರು, ಈಗ ಅದನ್ನು ನಿರ್ಮೂಲನೆ ಮಾಡಲಾಗಿದೆ ರೈತರಾರು ಕಳ್ಳರಲ್ಲ, ದುಡಿಯುವವರು ಎಂದು ಹೇಳಿದರು.
ಇದನ್ನೂ ಓದಿ: ಒಳಮೀಸಲಾತಿ: ಕಾಂಗ್ರೆಸ್‌ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ- ಸಚಿವ ಅಶೋಕ್