ಬೆಂಗಳೂರು: ಚುನಾವಣೆಗೆ ಕೆಲ ತಿಂಗಳು ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದತ್ತ ಹಲವು ಹಾಲಿ, ಮಾಜಿ ಶಾಸಕರು, ಮುಖಂಡರು ಬರುತ್ತಿದ್ದಾರೆ. ವಲಸೆ ಬಂದವರಿಗೆ ಮಣೆ ಹಾಕುವ ಕಾರ್ಯವಾದರೆ ನಮ್ಮ ಪಾಡೇನು ಅನ್ನುವ ಚಿಂತೆ ಈಗಾಗಲೇ ಅಭ್ಯರ್ಥಿ ಆಕಾಂಕ್ಷಿಗಳಾದಿಯಾಗಿ ವಿವಿಧ ವಿಧಾನಸಭೆ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ ಕೈ ನಾಯಕರನ್ನು ಕಾಡಲಾರಂಭಿಸಿದೆ. ಈಗಾಗಲೇ ಕೈ ಪಾಳಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣಗಳ ನಡುವಿನ ಕಿತ್ತಾಟ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕವಾದ ಬಳಿಕ ಇನ್ನೊಂದು ಶಕ್ತಿ ಕೇಂದ್ರ ದೆಹಲಿಯಲ್ಲಿ ಹುಟ್ಟಿಕೊಂಡಿದೆ.
ಚುನಾವಣೆ ವೇಳೆಗೆ ಈ ಮೂವರ ಜತೆ ಇನ್ನಷ್ಟು ಮಂದಿ ಪ್ರಭಾವಿಗಳು ಟಿಕೆಟ್ಗಾಗಿ ತಮ್ಮವರ ಪರ ಲಾಬಿ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಮಧ್ಯೆ ಕೆಲ ತಿಂಗಳ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಅರ್ಜಿಗೆ 5 ಸಾವಿರ ರೂ. ಹಾಗೂ ಸ್ವೀಕಾರಕ್ಕೆ ಒಂದರಿಂದ ಎರಡು ಲಕ್ಷ ರೂ. ಸ್ವೀಕರಿಸಿದೆ. ಇದೊಂದು ದೊಡ್ಡ ಮೊತ್ತ ಸಂಗ್ರಹಿಸಿರುವ ಕಾಂಗ್ರೆಸ್ ನಾಯಕರಿಗೆ ಇದುವರೆಗೂ ಅರ್ಜಿ ಸಲ್ಲಿಸಿದ ವಿವಿಧ ನಾಯಕರ ಕಡೆಯವರ ಒತ್ತಡವೇ ಹೆಚ್ಚಾಗಿತ್ತು.
ಆದರೆ, ಇದೀಗ ಇವೆಲ್ಲವನ್ನೂ ಮೀರಿ ಹಲವು ಪ್ರಭಾವಿಗಳು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ಇವರೆಲ್ಲಾ ಟಿಕೆಟ್ ನಿರೀಕ್ಷಿಸಲು ಆರಂಭಿಸಿದರೆ ಏನು ಕತೆ? ಅರ್ಜಿ ಸಲ್ಲಿಸಿದ ನಮ್ಮ ಪಾಡೇನು? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಸಾಕಷ್ಟು ಪಕ್ಷಾಂತರಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಕಾಂಗ್ರೆಸ್ ಬಿಡುವವರೂ ಸಾಕಷ್ಟು ಮಂದಿ ಇದ್ದಾರೆ. ಆದರೆ ಇಲ್ಲೇ ಇದ್ದು, ಟಿಕೆಟ್ ಪಡೆಯಬೇಕೆಂದು ಪ್ರಯತ್ನಿಸುತ್ತಿರುವ ನಾಯಕರಿಗೆ ಹೊರಗಿನಿಂದ ಬರುತ್ತಿರುವ ನಾಯಕರಿಂದಾಗಿ ನಿರಾಸೆ ಮೂಡುತ್ತಿದೆ.
ಈಗಾಗಲೇ ಕಡೂರು ಮಾಜಿ ಶಾಸಕ ವೈಎಸ್ವಿ ದತ್ತಾ, ಮಾಜಿ ಸಚಿವ ಹಾಗೂ ಶಾಸಕ ಹೆಚ್. ನಾಗೇಶ್ ಈಗಾಗಲೇ ಕೈ ಹಿಡಿದಿದ್ದು, ಕಡೂರು ಹಾಗೂ ಮುಳಬಾಗಿಲು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ಕ್ಷೇತ್ರದಿಂದ ಟಿಕೆಟ್ ಬಯಸಿ ಸುಮಾರು ಐದಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, 1 ರಿಂದ 2 ಲಕ್ಷ ರೂ. ಭರಿಸಿದ್ದಾರೆ. ಇವರಿಗೆ ಇದೀಗ ನಿರಾಸೆ ಉಂಟಾಗಿದೆ. ಈ ಮಧ್ಯೆ ವಿಧಾನ ಪರಿಷತ್ ಬಿಜೆಪಿ ಸದಸ್ಯರಾದ ಹೆಚ್. ವಿಶ್ವನಾಥ್ ಹಾಗೂ ಪುಟ್ಟಣ್ಣ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಸೇರ್ಪಡೆ ದಿನಾಂಕ ನಿಗದಿ ಆಗಬೇಕಿದೆ ಅಷ್ಟೆ.
ಇಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಆಪ್ತ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ, ಉದ್ಯಮಿ ಅಶೋಕ್ ಕುಮಾರ್ ರೈ ಕೈ ಪಕ್ಷದ ಕಡೆ ನಡೆದಿದ್ದಾರೆ. ಇದಲ್ಲದೇ ಸಾಕಷ್ಟು ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಇತ್ತೀಚೆಗೆ ತಿಳಿಸಿದ್ದಾರೆ. ಒಬ್ಬೊಬ್ಬರ ಸೇರ್ಪಡೆ ಆದಾಗಲೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ದಿಗಿಲು ಮೂಡುತ್ತಿದೆ.
ಎಲ್ಲರ ವಿಶ್ವಾಸ ಪಡೆಯುತ್ತೇವೆ.. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಗುರಿ ನಮ್ಮದು. 150 ಸ್ಥಾನ ಗೆಲ್ಲುವಂತೆ ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಾಕಷ್ಟು ನಾಯಕರು ಕಾಂಗ್ರೆಸ್ ಕಡೆ ಬರಲಿದ್ದಾರೆ. ಈಗಾಗಲೇ ಟಿಕೆಟ್ಗಾಗಿ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದವರಿದ್ದಾರೆ. ಅವರಿಗೆ ಅನ್ಯಾಯ ಮಾಡಲ್ಲ. ಒಂದೊಂದು ಕ್ಷೇತ್ರದಿಂದ ಐದರಿಂದ 15 ಮಂದಿವರೆಗೂ ಅರ್ಜಿ ಸಲ್ಲಿಸಿದವರಿದ್ದಾರೆ.
ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು. ಉಳಿದವರ ಮನವೊಲಿಕೆ ಮಾಡಬೇಕಿದೆ. ಅದೇ ರೀತಿ ಹೊರಗಿನಿಂದ ಬಂದವರನ್ನು ಬೇಷರತ್ತಾಗಿ ಸೇರಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಗೆಲ್ಲುವ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗಲಿದೆ. ಉಳಿದವರ ಮನವೊಲಿಕೆಯನ್ನು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಮಾಡಲಿದ್ದಾರೆ. ಪಕ್ಷ ಬಲಿಷ್ಠವಾಗಿದೆ. ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಎಲ್ಲರಿಗೂ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.
ಓದಿ : ಬೆಂಗಳೂರಿನ 300ಕ್ಕೂ ಹೆಚ್ಚು ಜಾಗಗಳಲ್ಲಿ ನಾಳೆ ಕಾಂಗ್ರೆಸ್ನಿಂದ ಪ್ರತಿಭಟನೆ : ಶಾಸಕ ಎನ್ ಎ ಹ್ಯಾರಿಸ್