ಬೆಂಗಳೂರು: ''ಕೇಂದ್ರ ಸರ್ಕಾರ ಬಡವರ ವಿರೋಧಿ ಕ್ರಮ ವಹಿಸುತ್ತಿದ್ದು, ದ್ವೇಷದ ರಾಜಕಾರಣ ಮಾಡ್ತಿದೆ'' ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧಲ್ಲಿ ಅಕ್ಕಿ ವಿಚಾರವಾಗಿ ಮಾತನಾಡಿದ ಅವರು, ''ಅನ್ನಭಾಗ್ಯ ಯೋಜನೆ ವಿಳಂಬ ಆಗುವುದಿಲ್ಲ. ಸ್ವಲ್ಪ ಸಾಗಾಣಿಕೆಗೆ ಸಮಯ ಹಿಡಿಯಬಹುದು. ನಾವು ಪಶ್ಚಿಮ ಬಂಗಾಳ, ಪಂಜಾಬ್ ಜೊತೆಗೆ ಮಾತನಾಡುತ್ತಿದ್ದೇವೆ. ಆಂಧ್ರ ಪ್ರದೇಶದ ಜೊತೆ ನಮ್ಮ ಅಧಿಕಾರಿಗಳು ಮಾತಾಡುತ್ತಿದ್ದಾರೆ. ಜೊತೆಗೆ ಕೇಂದ್ರದ ಸಂಸ್ಥೆಗಳಾದ ಎನ್ಸಿಸಿಎಫ್, ನಾಫೆಡ್, ಕೇಂದ್ರಿಯ ಭಂಡಾರದ ಜೊತೆಯೂ ಮಾತಾಡಿ ದರಪಟ್ಟಿ ಕರೆದಿದ್ದೇವೆ'' ಎಂದರು.
''ಬಡವರಿಗೆ ನೀಡುವ ಅಕ್ಕಿಯಲ್ಲಿ ದ್ವೇಷದ ರಾಜಕಾರಣ ಮಾಡ್ತಿದಾರಲ್ಲ. ಅವರಿಗೆ ಮಾನಮರ್ಯಾದೆ ಇದ್ಯಾ? ಫೆಡರಲ್ ಸ್ಟ್ರಕ್ಟರ್ ಬಗ್ಗೆ ಪ್ರಧಾನಿ ಯಾವಾಗಲು ಹೇಳ್ತಾರೆ. ಕೇಂದ್ರ ಸರ್ವಾಧಿಕಾರ ಸರ್ಕಾರ ಅಲ್ಲ. ಪ್ರಜಾಪ್ರಭುತ್ವ ಸರ್ಕಾರ, ಅವರು ಇತರೆ ರಾಜ್ಯಗಳಿಂದ ಅಕ್ಕಿ ಖರೀದಿಸುತ್ತಾರೆ. ಆಹಾರ ಭದ್ರತೆ ಕಾಯ್ದೆ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ತಂದಿದ್ದು, ಅವರು ಆರಂಭದಲ್ಲಿ ಒಪ್ಪಿ ಆಮೇಲೆ ಇಲ್ಲ ಎಂದು ಹೇಳಿದ್ದಾರೆ. ನಾನು ನಾಳೆ ರಾಷ್ಟ್ರಪತಿ, ಅಮಿತ್ ಷಾ ಅವರನ್ನ ಭೇಟಿ ಮಾಡುತ್ತೇವೆ. ಆಹಾರ ಸಚಿವ ಮುನಿಯಪ್ಪನವರು ಕೇಂದ್ರ ಆಹಾರ ಸಚಿವರನ್ನ ಭೇಟಿ ಮಾಡ್ತಾರೆ. ಅಕ್ಕಿ ವಿಚಾರವಾಗಿ ಚರ್ಚೆ ಮಾಡ್ತಾರೆ'' ಎಂದರು.
''ವಿಧಾನ ಪರಿಷತ್ ಉಪ ಚುನಾವಣೆಗೆ ನಮ್ಮ ಪಕ್ಷದ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಮೂವರು ಗೆದ್ದೆ ಗೆಲ್ತಾರೆ. ನಾಳೆ ನಾಮಪತ್ರ ಪರಿಶೀಲನೆ ನಡೆಸಿದ ಮೇಲೆ ಗೊತ್ತಾಗುತ್ತೆ. ಯಾರೋ ಪಕ್ಷೇತರ ಅಭ್ಯರ್ಥಿ ಯಾರೋ ಹಾಕಿದ್ದಾರಂತೆ ಎಂದು ಸಿಎಂ ತಿಳಿಸಿದರು.
ಕಾಂಗ್ರೆಸ್ ಪ್ರತಿಭಟನೆ: ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಸಕ್ಕರೆನಾಡಲ್ಲೂ ಕೇಂದ್ರದ ವಿರುದ್ಧ ಕೈ ಸಮರ ಸಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ದ ಕಿಡಿಕಾರಿದರು. ಜಿಲ್ಲೆ ಶಾಸಕರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಗುಡುಗಿದರು. ಮಳೆ ಬಂದ ಸಂದರ್ಭದಲ್ಲಿ ಚೇರ್, ಬ್ಯಾನರ್ ಅನ್ನೂ ತಲೆ ಮೇಲೆ ಹಿಡಿದುಕೊಂಡು ಪ್ರತಿಭಟನೆ ಮುಂದುವರಿದಸಿದರು.
ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ''ಕಾಂಗ್ರೆಸ್ ಕಾರ್ಯಕ್ರಮಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರ ಇಂತಹ ನೀಚ ಕೆಲಸಕ್ಕಿಳಿಯಬಾರದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡೋದನ್ನು ನಿರಾಕರಿಸಿದೆ. ಜೂನ್ 14ರಂದು ಎಫ್ಸಿಐ ಅವರನ್ನ ಕರೆದು ಸಿಎಂ ಮೀಟಿಂಗ್ ಮಾಡಿದ್ದಾರೆ. ಅವರು ಅಕ್ಕಿ ಇದೆ ಎಂದು ರೈಟಿಂಗ್ನಲ್ಲಿ ಮಾಹಿತಿ ಕೊಟ್ಟಿದ್ದಾರೆ. 15 ದಿನಗಳ ಬಳಿಕ ಬದಲಾವಣೆ ಮಾಡಿ ಕೊಡಲ್ಲ ಅಂತ ಹೇಳಿದೆ. ಇದು ಅನ್ಯಾಯ ಅಲ್ವಾ? ನಾವು ದುಡ್ಡು ಕೊಟ್ಟು ಸ್ಟಾಕ್ ಇರುವ ಅಕ್ಕಿ ಕೊಡೋದಕ್ಕೆ ಏನಿವರಿಗೆ? ರಾಜ್ಯಕ್ಕೆ ಬೇಕಾಗುವ ಸೌಲಭ್ಯ ಒದಗಿಸುವ ಜವಾಬ್ದಾರಿ ಅವರದು ಇದೆ. ರಾಷ್ಟ್ರದಲ್ಲಿ ಎಫ್ಸಿಐ ಮೂಲಕ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದಾರೆ ಅಂದ್ರೆ, ದುರುದ್ದೇಶ ರಾಜಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ನಾವು ಸಾಲ ಕೇಳ್ತಿಲ್ಲ. ದುಡ್ಡು ಕೊಡ್ತೇವೆ ಅಕ್ಕಿ ಕೊಡಿ ಎಂದು ಹೇಳಿದ್ದೇವೆ ಎಂದ ಅವರು, ಒಳ್ಳೆಯ ಅಭಿವೃದ್ಧಿ, ಸಧೃಡ ಆಡಳಿತ ಕೊಡ್ತೇವೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನಡೆಯುತ್ತಿದೆ. ಬಿಜೆಪಿಗೆ ಕಾಂಗ್ರೆಸ್ ಕುರಿತು ಭಯ ಶುರುವಾಗಿದೆ'' ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಹೆಂಡತಿಗೆ ಫ್ರೀ ಕೊಟ್ಟು ಗಂಡನ ಕಿಸೆಯಿಂದ ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ