ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ಕನಸು ಭಾರತ ಇಡೀ ಪ್ರಪಂಚಕ್ಕೆ ಸಂದೇಶ ನೀಡಬೇಕೆಂಬ ಕನಸು ಈಗ ನನಸಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಮಸೂದೆಗೆ ಪ್ರತಿ ಭಾರಿ ಕಾಂಗ್ರೆಸ್ನವರು ಅಡ್ಡಿಪಡಿಸುತ್ತಿದ್ದರು. ರಾಜಕೀಯ ಮಾಡಿ ಯಾವುದೋ ಒಂದು ಸಮುದಾಯಕ್ಕೆ ಸಂದೇಶ ಕೊಡುವ ಕೆಲಸ ಮಾಡುತ್ತಿದ್ದರು ಎಂದರು.
ಕಾಂಗ್ರೆಸ್ನವರು ಮಸೂದೆ ಜಾರಿಗೆ ಸಹಕಾರ ನೀಡಬೇಕಿತ್ತು. ಹಿಂದೆ ಅವರ ಪಕ್ಷದ ಗುರುತು ಪಶುಕರು ಇತ್ತು. ಅದನ್ನೇ ಅವರು ಮರೆತಿದ್ದಾರೆ. ಈ ಕೈ ಗುರುತಿನಿಂದ ಕೊಲೆ ಮಾಡುತ್ತಿದ್ದಾರೆ. ಈ ಕೈ ಗುರುತಿನಿಂದ ಕೊಲೆ ಮಾಡಬೇಡಿ ಅಂತ ತೆಡೆದಿದ್ದೇವೆ ಎಂದು ಟೀಕಿಸಿದರು.
ಹಿಂದು ಸಮುದಾಯ ಖುಷಿಯಾಗಿದೆ. ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌವ್ಹಾಣ್ ಮಂಡನೆ ಮಾಡಿದ ಬಿಲ್ ಸ್ಪಷ್ಟವಾಗಿದೆ. ಇವತ್ತು ನಾವು ಪುಣ್ಯರಾಗಿದ್ದೇವೆ ಎಂದರು.
ಗೋ ಹತ್ಯೆ ಆಗಬೇಕೆಂದು ಕಾಂಗ್ರೆಸ್ ನವರು ಮತ ಬ್ಯಾಂಕ್ ಮಾಡುತ್ತಿದ್ದಾರೆ. ಈಗ ಮಹಾತ್ಮಾ ಗಾಂಧೀಜಿಯವರ ಕನಸನ್ನು ನನಸು ಮಾಡಿದ್ದೇವೆ ಎಂದರು. ಜೆಡಿಎಸ್ ಪಕ್ಷದ ಜೊತೆ ದೋಸ್ತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾವುದೇ ಪಕ್ಷಗಳ ಜೊತೆ ದೋಸ್ತಿ ಇಲ್ಲ. ಸಭಾಪತಿ ವಿಚಾರದಲ್ಲಿ ಅದು ಚುನಾವಣೆ ಅಷ್ಟೇ. ನಮ್ಮ ಪಕ್ಷ ಸಿದ್ದಾಂತ ನಮ್ಮದು, ಅವರ ಪಕ್ಷದ ಸಿದ್ಧಾಂತ ಅವರದು ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ಶ್ರೇಯಸ್ಸು ಸಿಎಂಗೆ ಸಲ್ಲಬೇಕು: ಪ್ರಭು ಚವ್ಹಾಣ್