ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ತನಿಖೆ ಎದುರಿಸುತ್ತಿರುವ ಸ್ಯಾಂಟ್ರೋ ರವಿ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಸ್ಯಾಂಟ್ರೋ ರವಿ, ಇನ್ಸ್‌ಪೆಕ್ಟರ್ ಆಗಿದ್ದ ಪ್ರವೀಣ್ ಹಾಗೂ ಕಾಟನ್ ಪೇಟೆ ಠಾಣೆಯ 7 ಸಿಬ್ಬಂದಿ ವಿರುದ್ಧ ರವಿಯ 2ನೇ ಪತ್ನಿ ಸಹೋದರಿ ನಗರ ಪೊಲೀಸ್ ಆಯುಕ್ತರು, ಮಾನವ ಹಕ್ಕುಗಳ ಆಯೋಗ, ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಹಾಗೂ ಕಾಟನ್ ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ಸ್ಯಾಂಟ್ರೋ ರವಿ ಕಾಟನ್ ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಸಹಕಾರದಿಂದ ಈ ಹಿಂದೆ ತಾನು ಹಾಗೂ ತನ್ನ ಸಹೋದರಿಯ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದ. ಇದರಿಂದಾಗಿ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಜೈಲಿಗೆ ಹೋದ ಕಾರಣದಿಂದ ಪರೀಕ್ಷಾ ಪೂರಕ ಸಿದ್ಧತೆಗಳನ್ನ ಮಾಡಲು ಸಾಧ್ಯವಾಗಿಲ್ಲ. ನನ್ನ ಒಂದು ವರ್ಷದ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ ಎಂದು ಜ.20ರಂದು ರಿಜಿಸ್ಟ್ರಾರ್ ಪೋಸ್ಟ್ ಮುಖಾಂತರ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಐಡಿ ತನಿಖಾಧಿಕಾರಿಗಳ ಮುಂದೆ ಹಾಜರಾದ ಸ್ಯಾಂಟ್ರೋ ರವಿ 2ನೇ ಪತ್ನಿ
ಪ್ರಕಾಶ್ ಎಂಬಾತನಿಂದ ಹಣ ಪಡೆದು, ಬಳಿಕ ಆತನನ್ನೇ ಬೆದರಿಸಿ 13 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು, ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂಬ ಆರೋಪದಡಿ ಸ್ಯಾಂಟ್ರೋ ರವಿಯ ಪತ್ನಿ ರಶ್ಮಿ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧ ಷಡ್ಯಂತ್ರ ನಡೆಸಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸ್ಯಾಂಟ್ರೋ ರವಿ ಪತ್ನಿ ದೂರಿದ್ದರು.
ಪ್ರಕರಣ ದಾಖಲಿಸಿದ್ದ 2ನೇ ಪತ್ನಿ: ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ವಿರುದ್ಧ ಕೆಲ ದಿನಗಳ ಹಿಂದೆ ಚೆಕ್ ಕಳ್ಳತನ ಸಂಬಂಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಅವರ ಎರಡನೇ ಪತ್ನಿ ದೂರು ನೀಡಿದ್ದರು. ಸಂತ್ರಸ್ತೆ ನೀಡಿದ ದೂರು ಆಧರಿಸಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಿಐಡಿ ತನಿಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ: ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ.ಎಸ್. ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ಜನವರಿ 25ರ ವರೆಗೆ ನ್ಯಾಯಾಂಗ ಬಂಧನ: ಅತ್ಯಾಚಾರ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಪ್ರಕರಣಗಳ ಆರೋಪಿ ಸ್ಯಾಂಟ್ರೊ ರವಿಯನ್ನು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಇತ್ತೀಚೆಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿ, ಸ್ಯಾಂಟ್ರೊ ರವಿಯ ನ್ಯಾಯಾಂಗ ಬಂಧನವನ್ನು ಜನವರಿ 25ರ ವರೆಗೆ ವಿಸ್ತರಿಸಿ ನ್ಯಾಯಾಧೀಶರಾದ ಗುರುರಾಜ್ ಆದೇಶಿಸಿದ್ದರು.
ಇದನ್ನೂ ಓದಿ: ಸಿಐಡಿ ಪಾರದರ್ಶಕವಾಗಿ ತನಿಖೆ ನಡೆಸಲಿ: ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪ್ರಕರಣ ದಾಖಲಿಸಿದ ಮಹಿಳೆ