ಬೆಂಗಳೂರು: ಇನ್ನೆರಡು ದಿನದಲ್ಲಿ ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ ಕುರಿತು ಮಧ್ಯಂತರ ಆದೇಶ ಜಾರಿಗೊಳಿಸಿದಲ್ಲಿ ಮಾತ್ರ ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್ ಪಡೆಯಲಾಗುತ್ತದೆ. ಇಲ್ಲದೇ ಇದ್ದಲ್ಲಿ ಈಗಾಗಲೇ ಘೋಷಣೆ ಮಾಡಿರುವಂತೆ ಮಾರ್ಚ್ ಒಂದರಿಂದ ರಾಜ್ಯದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.
2022 ರ ಬಜೆಟ್ನಲ್ಲಿಯೇ ಏಳನೇ ವೇತನ ಆಯೋಗದ ಜಾರಿಯ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರು 2023ನೇ ಸಾಲಿನ ಬಜೆಟ್ನಲ್ಲಿಯೂ ಏಳನೇ ವೇತನ ಆಯೋಗ ಜಾರಿಯ ಕುರಿತ ಘೋಷಣೆ ಮಾಡದಿರುವುದಕ್ಕೆ ತೀವ್ರ ಅಸಮಧಾನಿತರಾಗಿದ್ದು, ಅನಿರ್ದಿಷ್ಟಾವಧಿ ಹೋರಾಟದ ನಿರ್ಧಾರಕ್ಕೆ ಬಂದಿದ್ದಾರೆ.
ಹೋರಾಟ ಖಚಿತವೆಂದ ಸರ್ಕಾರಿ ನೌಕರರು: ಕಳೆದ ಬಜೆಟ್ನ ನಂತರ ಆಯೋಗ ರಚನೆಯ ಭರವಸೆ ನೀಡಿ ಸರ್ಕಾರಿ ನೌಕರರ ಆಕ್ರೋಶವನ್ನು ತಣಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಅದೇ ರೀತಿಯ ತಂತ್ರವನ್ನು ಅನುಸರಿಸಿ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸುವ ಆಶ್ವಾಸನೆಯನ್ನು ನೀಡಿದ್ದಾರೆ. ಆದರೆ ಈ ಭರವಸೆಗೆ ಸರ್ಕಾರಿ ನೌಕರರು ಅಷ್ಟಾಗಿ ಸಂತಸಗೊಂಡಿಲ್ಲ. ಮಧ್ಯಂತರ ಆದೇಶ ಜಾರಿಗೊಳಿಸಿದ ನಂತರವೇ ಮುಷ್ಕರದ ನಿಲುವನ್ನು ಕೈಬಿಡಲಾಗುತ್ತದೆ. ಇಲ್ಲದೇ ಇದ್ದಲ್ಲಿ ಹೋರಾಟ ಖಚಿತ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಸ್ಪಷ್ಟೀಕರಣ ನೀಡಿದ್ದರು. ನಮ್ಮ ಬೇಡಿಕೆಯನ್ನು ಬಜೆಟ್ನಲ್ಲಿ ಕಡೆಗಣಿಸಲಾಗಿದೆ. ಬಜೆಟ್ನಲ್ಲಿಯೇ ನಮಗೆ ಏಳನೇ ವೇತನ ಆಯೋಗ ಜಾರಿಯ ಘೋಷಣೆ ನಿರೀಕ್ಷೆ ಇತ್ತು. ಆದರೆ ನಮ್ಮ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ. ಆದರೆ ಈಗ ನಮ್ಮ ಹೋರಾಟಕ್ಕೆ ಮಣಿದು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಮಧ್ಯಂತರ ಆದೇಶಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು ಎಂದು ತಿಳಿಸಿದ್ದರು.
ರಾಜ್ಯ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ : ಮಾರ್ಚ್ನಲ್ಲಿ ಈ ಕುರಿತ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ. ಈ ಆಶ್ವಾಸನೆಯನ್ನು ನಾವು ಒಪ್ಪುತ್ತೇವೆ. ಆದರೆ ಮಾರ್ಚ್ 1 ರ ಒಳಗಡೆಯೇ ನಮಗೆ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಬೇಕು. ಇಲ್ಲದೇ ಇದ್ದಲ್ಲಿ ಈಗಾಗಲೇ ನಿರ್ಧಾರ ಕೈಗೊಂಡಿರುವಂತೆ ಮಾರ್ಚ್ 1 ರಿಂದ ರಾಜ್ಯ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ ಎಂದು ಷಡಕ್ಷರಿ ಹೇಳಿದ್ದಾರೆ.
ಶಾಲಾ-ಕಾಲೇಜು ನೌಕರರು, ಆರೋಗ್ಯ ಇಲಾಖೆ, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ವಿವಿಧ ವೃಂದಗಳ ನೌಕರರು ನಮ್ಮ ಹೋರಾಟದ ಜೊತೆ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ ತಿಂಗಳೋ ಮತ್ತೊಂದು ತಿಂಗಳೋ ನಾವು ಅಲ್ಲಿಯವರೆಗೂ ಕಾಯುತ್ತಾ ಕೂರುವುದಿಲ್ಲ. ಫೆಬ್ರವರಿ 28 ಸರ್ಕಾರಕ್ಕೆ ಡೆಡ್ ಲೈನ್ ಆಗಿದ್ದು, ಅಷ್ಟರಲ್ಲಿ ನಮ್ಮ ಬೇಡಿಕೆ ಪರಿಗಣಿಸಿ ಮಧ್ಯಂತರ ಆದೇಶಗಳ ಜಾರಿಗೆ ಕ್ರಮ ಕೈಗೊಳ್ಳಬೇಕು, ಇಲ್ಲದೇ ಇದ್ದಲ್ಲಿ ಮಾರ್ಚ್ 1 ರಿಂದ ನಮ್ಮ ಹೋರಾಟ ನಿಶ್ಚಿತ ಎಂದು ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ : ಇದಕ್ಕೆ ದನಿಗೂಡಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಜೇಂದ್ರ ಕಿ ಉಮಾರ್ ಗಂದಗೆ, 2022 ಜುಲೈ 1 ರಿಂದ ನಮಗೆ ಏಳನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಜಾರಿಯಾಗಬೇಕು. ಮಾರ್ಚ್ನಲ್ಲಿ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸಧ್ಯದಲ್ಲೇ ನೀತಿ ಸಂಹಿತೆ ಜಾರಿಯಾಗಲಿದೆ. ನಂತರ ಸರ್ಕಾರಕ್ಕೆ ಯಾವುದೇ ಆದೇಶ ಹೊರಡಿಸುವ ಅಧಿಕಾರವಿರುವುದಿಲ್ಲ. ಹಾಗಾಗಿ ತಕ್ಷಣವೇ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಬೇಕು ಮತ್ತು ರಾಜ್ಯದ ಎನ್ಪಿಎಸ್ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಎಲ್ಲರನ್ನೂ ಒಪಿಎಸ್ ಪಿಂಚಣಿ ವ್ಯಾಪ್ತಿಗೆ ತರಬೇಕು. ಇಲ್ಲದೇ ಇದ್ದಲ್ಲಿ ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಇನ್ನು, ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ವಿಚಾರದಲ್ಲಿ ತನ್ನ ನಿಲುವನ್ನು ಈಗಾಗಲೇ ವಿಧಾನಸಭೆಯಲ್ಲಿಯೇ ಸ್ಪಷ್ಟಪಡಿಸಿದೆ. ಬಜೆಟ್ ಮೇಲಿನ ಉತ್ತರದ ವೇಳೆ ಈ ಕುರಿತು ಸದನದಲ್ಲಿಯೇ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ ತಿಂಗಳಿನಲ್ಲಿ ಏಳನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದುಕೊಂಡು ಅದರ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತದೆ ಎನ್ನುವ ಭರವಸೆ ನೀಡಿದ್ದರು. ಆದರೆ ಇದಕ್ಕೆ ನೌಕರರ ಸಂಘ ಅಸಮ್ಮತಿ ವ್ಯಕ್ತಪಡಿಸಿದೆ.
ಮಾರ್ಚ್ 1ರ ಒಳಗಡೆಯೇ ಮಧ್ಯಂತರ ವರದಿಯ ಆದೇಶಗಳು ಜಾರಿಯಾಗಬೇಕು ಎಂದು ಪಟ್ಟು ಹಿಡಿದಿದೆ. ಆದರೆ ಈ ಕುರಿತು ಸರ್ಕಾರಿ ನೌಕರರ ಸಂಘದ ಜೊತೆ ಸರ್ಕಾರ ಈವರೆಗೂ ಮಾತುಕತೆಗೆ ಮುಂದಾಗಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಲಹೆ ಕೇಳಿದ್ದು, ಸೋಮವಾರ ಬಹುತೇಕ ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದೆಲ್ಲೆಡೆ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್