ಬೆಂಗಳೂರು : ಐಎಂಎ ಪ್ರಕರಣದಲ್ಲಿ ಆರೋಪಿಯಾಗಿರುವ ಐಎಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ತಿಲಕ್‌ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಐಎಎಸ್ ಅಧಿಕಾರಿಯಾಗಿದ್ದ ವಿಜಯಶಂಕರ್ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ತನಿಖೆ ಮುಂದುವರೆಸಿದ್ದಾರೆ.
ನಗರದಲ್ಲಿ ನಡೆದ ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ನಿಂದ 1.5 ಕೋಟಿ ರೂ. ಹಣ ಪಡೆದ ಆರೋಪ ಇವರ ಮೇಲಿತ್ತು. ಅದೇ ಕಾರಣಕ್ಕೆ ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದಾಗ ಮೊದಲು ಎಸ್‌ಐಟಿ ಬಂಧಿಸಿ ಜೈಲಿಗೆ ಕಳುಹಿಸಿತ್ತು. ನಂತರ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿ ತನಿಖೆ ಮುಂದುವರೆದಿತ್ತು.
ಆಗ್ನೇಯ ವಿಭಾಗ ಡಿಸಿಪಿ ಜೋಷಿ ಶ್ರೀನಿವಾಸ್ ಮಹದೇವನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ ಪುತ್ರಿ ಇದ್ದರು. ಸಂಜೆ 7 ಗಂಟೆ ಸುಮಾರಿಗೆ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಹುಕೋಟಿ ಐಎಂಎ ವಂಚನೆ ಪ್ರಕರಣ ಆರೋಪಿ ಮನ್ಸೂರ್ನಿಂದ ವಿಜಯ್‌ಶಂಕರ್ ಕೋಟಿ ಕೊಟಿ ಹಣ ಪಡೆದಿರುವ ಆರೋಪವಿದೆ. ಈ ಕುರಿತು ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್ ಸಿ ನಾಗರಾಜ್ ಹೇಳಿಕೆ ಆಧಾರದ ಮೇಲೆ ವಿಜಯ್‌ಶಂಕರ್ ಪಾತ್ರ ಬಯಲಾಗಿತ್ತು.
ಆತ್ಮಹತ್ಯೆ ಕಾರಣ-1
ವಿಜಯ್ ಶಂಕರ್ಗೆ ಜೂನ್ 12ರಂದು ವಿಚಾರಣೆಗೆ ಹಾಜರಾಗಲು ಸಿಬಿಐ ನೊಟೀಸ್ ನೀಡಿತ್ತು. ಹಾಜರಾಗದ ಹಿನ್ನಲೆ ಮತ್ತೊಂದು ಮೆಮೋ ಕಳುಹಿಸಲಾಗಿತ್ತು. ಈ ವಿಚಾರಣೆಗೆ ಹಾಜರಾಗಲು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಕಾರಣ-2
ಯಾವುದೇ ಹುದ್ದೆ ಇಲ್ಲದೇ ಐಎಂಎ ಪ್ರಕರಣದಿಂದ ಖಿನ್ನತೆಗೆ ಒಳಗಾಗಿದ್ದರು. ಪದೇ ಪದೇ ವಿಚಾರಣೆ ಎದುರಿಸಿ ಕುಗ್ಗಿದ್ದರು. ಕಳೆದ 8-10 ತಿಂಗಳಿನಿಂದ ಮನೆಯಲ್ಲೇ ಇದ್ದ ವಿಜಯ್ ಶಂಕರ್ರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಸಿಬಿಐ ಮುಂದಾಗಿತ್ತು. ಮೇಲ್ನೋಟಕ್ಕೆ ಇದೇ ಕಾರಣದ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲಿಸರಿಗೆ ಇದೆ.