ಬೆಂಗಳೂರು : ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯವಾಗುತ್ತಿದ್ದಂತೆ ನಾಳೆ (ಶುಕ್ರವಾರ) ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ದೇವನಹಳ್ಳಿಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ರಾತ್ರಿ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದು, ಲಿಂಗಾಯತ ವಿರೋಧಿ ಅಸ್ತ್ರಕ್ಕೆ ತಿರುಗೇಟು ನೀಡಲು ಪ್ರತಿತಂತ್ರ ರೂಪಿಸುವ ಕುರಿತು ಚರ್ಚಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ನವದೆಹಲಿಯಿಂದ ಪ್ರಯಾಣಿಸಲಿದ್ದು, ಮಧ್ಯಾಹ್ನ 3.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 3.45 ರಿಂದ ಸಂಜೆ 5.15 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ರೋಡ್ ಶೋ ನಡೆಯಲಿದೆ.
ರೋಡ್ ಶೋ ಮುಗಿಸಿದ ನಂತರ ಸಂಜೆ 6 ಗಂಟೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಆಗಮಿಸಲಿದ್ದಾರೆ. ಸಂಜೆ 6 ರಿಂದ 7 ರವರೆಗೆ ಸಮಯ ಕಾಯ್ದಿರಿಸಿರುವ ಅಮಿತ್ ಶಾ ಮಹತ್ವದ ಚರ್ಚೆ, ಮುಖ್ಯ ವ್ಯಕ್ತಿಗಳ ಭೇಟಿಗಾಗಿ ಸಮಯ ಕಾಯ್ದಿರಿಸಿಕೊಂಡಿದ್ದಾರೆ. ಸಂಜೆ 7 ರಿಂದ 7.40 ರವರೆಗೆ ಭೋಜನಕ್ಕೆ ಸಮಯ ಕಾಯ್ದಿರಿಸಿದ್ದು, ರಾತ್ರಿ 7.45 ರಿಂದ 9.00 ಗಂಟೆವರೆಗೂ ರಾಜಕೀಯ ಸಭೆ ನಡೆಸಲಿದ್ದಾರೆ.
ಪಕ್ಷದಲ್ಲಿ ಟಿಕೆಟ್ ಹಂಚಿಕೆ ನಂತರ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅಮಿತ್ ಶಾ ರಾಜ್ಯ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಬಂಡಾಯ ಶಮನಕ್ಕೆ ನಡೆಸಿರುವ ಪ್ರಯತ್ನಗಳ ಕುರಿತು ವಿವರಣೆ ನೀಡಲಿದ್ದಾರೆ. ಈ ಬಾರಿ 73 ಕಡೆ ಹೊಸ ಮುಖಕ್ಕೆ ಅವಕಾಶ ನೀಡಿದ್ದು ಅಲ್ಲೆಲ್ಲ ಬಂಡಾಯ ಶಮನಕ್ಕೆ ನಡೆಸಿರುವ ಪ್ರಯತ್ನ ಮತ್ತು ಪ್ರಸ್ತುತ ಸನ್ನಿವೇಶಗಳ ವಿವರ ನೀಡಲಿದ್ದಾರೆ.
ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ: ಇದೇ ವೇಳೆ ಬಹುಮುಖ್ಯವಾಗಿ ಲಿಂಗಾಯತ ವಿರೋಧಿ ಬಿಜೆಪಿ ಎನ್ನುವ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗ ಮಾಡುತ್ತಿರುವ ಕುರಿತು ಚರ್ಚೆ ನಡೆಯಲಿದೆ. ಜಗದೀಶ್ ಶೆಟ್ಟರ್ ಹಾಗು ಲಕ್ಷ್ಮಣ ಸವದಿ ಇಬ್ಬರ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಲಿಂಗಾಯತ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲು ಹೊರಟಿರುವ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚೆ ನಡೆಯಲಿದೆ.
ಯಡಿಯೂರಪ್ಪ ನಿವಾಸದಲ್ಲಿ ನಡೆದ ಪಕ್ಷದ ಲಿಂಗಾಯತ ನಾಯಕರ ಸಭೆಯಲ್ಲಿ ಮುಂದಿನ ಸಿಎಂ ಲಿಂಗಾಯತ ವ್ಯಕ್ತಿ ಆಗಿರಲಿದ್ದಾರೆ ಎನ್ನುವ ಭರವಸೆ ಜನರಿಗೆ ನೀಡಬೇಕು ಎನ್ನುವ ಒಲವು ವ್ಯಕ್ತವಾಗಿದ್ದು, ಈ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ. ಜೊತೆಗೆ ಕಾಂಗ್ರೆಸ್ಗೆ ಯಾವ ರೀತಿ ಟಾಂಗ್ ನೀಡಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತದೆ. ಜಗದೀಶ್ ಶೆಟ್ಟರ್ ಹಾಗೂ ಸವದಿ ಕ್ಷೇತ್ರದಲ್ಲಿ ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು, ಸಮಾವೇಶಗಳು, ರ‍್ಯಾಲಿ ಯಾವ ರೀತಿ ನಡೆಯಬೇಕು, ಸ್ಟಾರ್ ಪ್ರಚಾರಕರ ಬಳಕೆ ಹೇಗೆ? ಇತ್ಯಾದಿಗಳ ಕುರಿತು ಚರ್ಚೆ ನಡೆಯಲಿದ್ದು, ಇಡೀ ಪ್ರಚಾರ ಕಾರ್ಯದ ನೀಲನಕ್ಷೆಯ ಕುರಿತು ಚರ್ಚಿಸಲಾಗುತ್ತದೆ.
ಸಭೆ ನಂತರ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿಯೇ ವಾಸ್ತವ್ಯ ಹೂಡಲಿರುವ ಅಮಿತ್ ಶಾ ಶನಿವಾರ ಬೆಳಗ್ಗೆ 10.30 ರಿಂದ 11.30 ರವರೆಗೆ ಖಾಸಗಿ ವಾಹಿನಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಂತರ 12 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ : ಬಿಜೆಪಿಯ ಅಚ್ಚರಿ ಆಯ್ಕೆಯ ಪರಿಣಾಮ: 23 ಹಾಲಿ ಶಾಸಕರ ಕ್ಷೇತ್ರಗಳಲ್ಲಿ 7 ಕಡೆ ಬಂಡಾಯ