ಬೆಂಗಳೂರು: ದೇಶದಲ್ಲಿ ಪ್ರಸ್ತುತ ಭ್ರಷ್ಟಾಚಾರವಿದ್ದರೂ ಮುಂದಿನ ಪೀಳಿಗೆ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಭರವಸೆ ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ನೈತಿಕ ಮತ್ತು ಸಾಂವಿಧಾನಿಕ ಮೌಲ್ಯಗಳ ಅಧಃಪತನ’ ವಿಷಯ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಲೋಕಾಯುಕ್ತ ಸಂಸ್ಥೆಗೆ ಬಂದ ಬಳಿಕ ಭ್ರಷ್ಟಾಚಾರ ಎಷ್ಟಿದೆ ಎಂಬುದು ಗೊತ್ತಾಯಿತು. ನನ್ನ ಕಾಲದಲ್ಲಿ ಅದನ್ನು ತೊಡೆದು ಹಾಕಲು ಸಾಧ್ಯವಾಗಲಿಲ್ಲ. ಆದರೆ, ಸಾಕಷ್ಟು ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಭ್ರಷ್ಟಾಚಾರದಿಂದ ಆಗುವ ಅನಾಹುತಗಳ ಕುರಿತು ವಿವರಿಸಿದ್ದೇನೆ. ಮುಂದಿನ ಪೀಳಿಗೆ ಭ್ರಷ್ಟಾಚಾರದ ಕುರಿತು ಎಚ್ಚರಗೊಳ್ಳುವ ಭರವಸೆಯಿದೆ ಎಂದು ತಿಳಿಸಿದರು.
ದೇಶದಲ್ಲಿ ಭ್ರಷ್ಟಾಚಾರ ಬೃಹದಾಕಾರವಾಗಿ ಬೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಸಮಾನವಾಗಿ ಕಾರಣವಾಗಿವೆ. ಈ ಹಿಂದೆ ಜೈಲಿನಲ್ಲಿ ಹೊರಬಂದವನ್ನು ಇಡೀ ಸಮಾಜವು ಬಹಿಷ್ಕರಿಸುವ ಒಂದು ಕಾಲವಿತ್ತು. ಆದರೆ, ಇದೀಗ ಜೈಲಿನಿಂದ ಹೊರಬಂದವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಗುತ್ತಿದೆ. ವಿವಿಧ ಮಟ್ಟದಲ್ಲಿರುವ ಭ್ರಷ್ಟಾಚಾರವು ಸಾಮಾಜಿಕ ಮೌಲ್ಯಗಳನ್ನು ಕುಗ್ಗಿಸಿವೆ. 1960ರಲ್ಲಿ ಶಾಸಕರಿಗೆ ವೇತನ ಕೊಡುತ್ತಿಲ್ಲ. ಆದರೂ ಅವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಶಾಸಕರಿಗೆ ತಿಂಗಳಿಗೆ ಎರಡು ಲಕ್ಷ ರೂ. ವೇತನ ಪಾವತಿಸುತ್ತಿದ್ದರೂ ಭ್ರಷ್ಟಾಚಾರ ಉತ್ತುಂಗಕ್ಕೆ ಏರುತ್ತಿದೆ.
ಲೋಕಾಯುಕ್ತನಾಗುವ ಮೊದಲು ನಾನು ಭಾವಿಯಲ್ಲಿ ಕಪ್ಪೆಯಂತಿದ್ದೆ. ಲೋಕಾಯುಕ್ತನಾದ ಬಳಿಕ ಭ್ರಷ್ಟಾಚಾರದ ಸಮಸ್ಯೆಯನ್ನು ಹತ್ತಿರದಿಂದ ಕಂಡು ಆಘಾತಗೊಂಡೆ. ನೈತಿಕ ಮೌಲ್ಯಗಳಿಗಾಗಿ ಹೊರಾಡಬೇಕಾಗಿರುವ ಸಮಾಜ, ಸ್ವಾರ್ಥ ಮತ್ತು ದುರಾಸೆಯಲ್ಲಿ ಮುಳುಗಿ ಹೋಗಿದೆ. ಎಲ್ಲರೂ ಮಾನವೀಯತೆ ಕಳೆದುಕೊಂಡಿದ್ದಾರೆ. 1954ರ ಜೀಪ್ಸ್ ಹಗರಣದ ಮೊತ್ತ 54 ಲಕ್ಷ ರೂ. ಆಗಿತ್ತು. 2ಜಿ ಹಗರಣ ನಡೆದಾಗ ಭ್ರಷ್ಟಾಚಾರದ ಹಗರಣದ ಮೊತ್ತ 1.76 ಸಾವಿರ ಕೋಟಿ ರೂ ದಾಟಿತ್ತು ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಂ.ಟಿ. ನಾಣಯ್ಯ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜು, ವಕೀಲ ಎನ್.ಪಿ. ಅಮೃತೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..