ಬೆಂಗಳೂರು: "ನಾವು ಮತ್ತು ತಮಿಳುನಾಡಿನವರು ಅಣ್ಣ-ತಮ್ಮಂದಿರಂತೆ ಕಾವೇರಿ ವಿಚಾರ ಬಗೆಹರಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹಿಂದೆ ಹೇಳಿದ್ದರು. ಅವರ ಮಾತಿನಂತೇ ನಾನು ನಡೆಯುತ್ತಿದ್ದೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿಂದು ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನೀರಿನ ವಿಚಾರವಾಗಿ ದಿನಾ ಜಗಳ ಮಾಡುವುದಕ್ಕಿಂತ, ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ತಮಿಳುನಾಡು ಮತ್ತು ಕರ್ನಾಟಕದ ಜನ ಪರಸ್ಪರ ಎರಡೂ ಕಡೆ ಜೀವನ ಮಾಡುತ್ತಿದ್ದಾರೆ. ಹೀಗಿದ್ದಾಗ ಜಗಳ ಮಾಡುವುದು ಸರಿಯೇ? ಈ ಹಿಂದೆ ಜೂನ್ 2021ರಲ್ಲಿ ಕುಮಾರಸ್ವಾಮಿ ಟ್ವೀಟ್ ಮೂಲಕ ಇದನ್ನೇ ಹೇಳಿದ್ದರು. ನಮ್ಮ ಕರ್ನಾಟಕ ರಾಜ್ಯಕ್ಕೆ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪೀಠ ರಚನೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾವು ನಮ್ಮ ರಾಜ್ಯದ ಪರಿಸ್ಥಿತಿ ವಾಸ್ತವಾಂಶವನ್ನು ನ್ಯಾಯಾಲಯದ ಮುಂದೆ ಇಡುತ್ತೇವೆ" ಎಂದರು.
124 ಟಿಎಂಸಿ ನೀರು ಅಗತ್ಯ: ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ನಮಗೆ ಒಟ್ಟು 124 ಟಿಎಂಸಿ ನೀರು ಅಗತ್ಯವಿದೆ. ಆದರೆ ಈಗ ಇರುವುದು ಕೇವಲ 55 ಟಿಎಂಸಿ ಮಾತ್ರ. ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರಕ್ಕೆ 20 ಟಿಎಂಸಿ ಬೇಕು. ಕೆಆರ್ಎಸ್ನಲ್ಲಿ 22 ಟಿಎಂಸಿ, ಕಬಿನಿಯಲ್ಲಿ 6.5 ಟಿಎಂಸಿ, ಹಾರಂಗಿಯಲ್ಲಿ 7 ಟಿಎಂಸಿ ಹಾಗೂ ಹೇಮಾವತಿಯಲ್ಲಿ 20 ಟಿಎಂಸಿ ನೀರಿದೆ.
ಬುಧವಾರ ಸರ್ವಪಕ್ಷ ಸಭೆ: ಆ.23ರ ಬುಧವಾರ ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ವಿಚಾರವಾಗಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರೆಯಲಾಗಿದೆ. ಮಾಜಿ ಮುಖ್ಯಮಂತ್ರಿಗಳು, ಸಂಸದರನ್ನು ನಾವು ಸಭೆಗೆ ಕರೆದಿದ್ದೇವೆ. ಸಭೆಯಲ್ಲಿ ಸರ್ವಪಕ್ಷ ನಿಯೋಗ ಹೋಗಿ ಕೇಂದ್ರಕ್ಕೆ ಒತ್ತಡ ಹಾಕಲು ಒಪ್ಪಿದರೆ ನಾವು ಅದಕ್ಕೆ ಸಿದ್ಧ. ನಮಗೆ ರಾಜ್ಯ ರೈತರ ಹಿತ ಮುಖ್ಯ. ನಮ್ಮ ರಾಜ್ಯದ ಗೌರವ ಉಳಿಯಬೇಕು. ಇದು ಎಲ್ಲಾ ಪಕ್ಷಗಳ ಜವಾಬ್ದಾರಿ. ಮೇಕೆದಾಟು ಯೋಜನೆಯಲ್ಲಿ ಹುಲಿ ಸಂರಕ್ಷಣೆ ಪ್ರದೇಶ ಸೇರಿದಂತೆ ಅನೇಕ ಅಡಚಣೆ ಬಂದಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ವಪಕ್ಷ ಸಭೆ ಕರೆದಿದ್ದೇವೆ.
ಸಭೆ ನಂತರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬೇಕೇ ಬೇಡವೇ ಎಂದು ತೀರ್ಮಾನ ಮಾಡಲಾಗುವುದು. ಕೋರ್ಟ್ ಆಗಸ್ಟ್ 31ರ ತನಕ 10 ಸಾವಿರ ಕ್ಯೂಸೆಕ್ಸ್ ಬಿಡಬೇಕು ಎಂದು ಹೇಳಿತ್ತು. ಈ ಬಗ್ಗೆ ವಿರೋಧ ಪಕ್ಷಗಳು ಅನೇಕ ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಅವರು ಎಷ್ಟು ನೀರು ಬಿಟ್ಟಿದ್ದರು ಎಂಬುದರ ಬಗ್ಗೆ ನನಗೆ ಅರಿವಿದೆ ಎಂದು ಚಾಟಿ ಬೀಸಿದರು. ತಮಿಳುನಾಡು ಸರ್ಕಾರ ಕೇಂದ್ರ ನೀರಾವರಿ ಪ್ರಾಧಿಕಾರದ ವಿರುದ್ದ ಹೋಗಿದ್ದಾರೆಯೇ ಹೊರತು ಕರ್ನಾಟಕ ಸರ್ಕಾರದ ವಿರುದ್ಧ ಅಲ್ಲ. ಕೇಂದ್ರ ಸರ್ಕಾರ ತಮಿಳುನಾಡು ಅರ್ಜಿ ವಿರುದ್ಧ ಅಫಿಡವಿಟ್ ಸಲ್ಲಿಸಬಹುದಿತ್ತು. ಆದರೆ ಏಕೆ ಸಲ್ಲಿಸಿಲ್ಲ? ಇದೆಲ್ಲವೂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತಿರುವ ವಿಚಾರ.
ಆದರೂ ಬೊಮ್ಮಾಯಿ ಅವರು ಸರ್ಕಾರಕ್ಕೆ ನೀರು ಬಿಡಬೇಡಿ ಎಂದು ಪತ್ರ ಬರೆದಿದ್ದಾರೆ. ಕುಮಾರಸ್ವಾಮಿ ಅವರು ಮೈತ್ರಿ ಕಾರಣಕ್ಕೆ ನೀರು ಹರಿಸಲಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡಿನವರು 64 ಟಿಎಂಸಿ ನೀರನ್ನು ಬಳಸಿಕೊಂಡಿದ್ದಾರೆ ಎಂದು ಬೊಮ್ಮಾಯಿ ಅವರು ಆರೋಪ ಮಾಡುತ್ತಿದ್ದಾರೆ. ಅವರ ಪಾಲಿನ ನೀರನ್ನು ಬಳಸಿಕೊಳ್ಳುವುದ್ದಕ್ಕೆ ನಾವು ಅಡ್ಡಿ ಪಡಿಸಲು ಆಗುತ್ತದೆಯೇ? ಅವರ ಪಾಲಿನ ನೀರನ್ನು ಅವರು ಹೇಗಾದರೂ ಬಳಸಿಕೊಳ್ಳಲಿ. ಅದನ್ನು ಪ್ರಶ್ನಿಸುವ ಹಕ್ಕು ನಮಗೆ ಇಲ್ಲ ಎಂದು ಹೇಳಿದರು.
ಕಾವೇರಿ ನೀರು ವಿಚಾರವನ್ನು ವಿನಾಕಾರಣ ವಿವಾದ ಮಾಡಲಾಗುತ್ತಿಲ್ಲವೆ ಎಂದು ಕೇಳಿದಾಗ, "ಕೆಲವರು ರಾಜಕಾರಣ ಮಾಡಬೇಕು, ಅದಕ್ಕೆ ವಿವಾದ ಮಾಡುತ್ತಿದ್ದಾರೆ ಎಂದು ಹೇಳಿದರು. ನೈಸ್ ಹಗರಣದ ದಾಖಲೆಗಳ ಬಿಡುಗಡೆ ಬಗ್ಗೆ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ಸದಾ ಸುದ್ದಿಯಲ್ಲಿ ಇರಬೇಕು ಎಂದು ಇದೇ ವಿಚಾರವನ್ನು ಪದೇ, ಪದೇ ಮುನ್ನೆಲೆಗೆ ತರುತ್ತಿದ್ದಾರೆ. ಏನು ಬೇಕಾದರೂ ಬಿಡುಗಡೆ ಮಾಡಲು ಅವರು ಸ್ವತಂತ್ರರು. ನಾನು ಎಷ್ಟು ಹೆದರಿಕೊಳ್ಳುತ್ತೇನೆ ಎನ್ನುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ವಿನಾಕಾರಣ ಅದೇ ವಿಚಾರ ಮಾತನಾಡಲು ಇಷ್ಟವಿಲ್ಲ. ನನಗೆ ಮಾಡಲು ಬೇರೆ ಕೆಲಸಗಳಿವೆ" ಎಂದು ಪ್ರತ್ಯುತ್ತರ ನೀಡಿದರು.
ಇದನ್ನೂ ಓದಿ: SC-ST ವಿದ್ಯಾರ್ಥಿಗಳ ಲ್ಯಾಪ್ಟಾಪ್ಗೆ ₹230 ಕೋಟಿ ಒದಗಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ