ಬೆಂಗಳೂರು: ಬಿಜೆಪಿ ಹೈಕಮಾಂಡ್ ಹಾಗು ರಾಜ್ಯಪಾಲರಿಗೆ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಬರೆಯುತ್ತಿದ್ದಂತೆ ಆಪ್ತ ಸಚಿವರು ಮತ್ತು ಶಾಸಕರು ಸಿಎಂ ಬೆಂಬಲಕ್ಕೆ ನಿಂತಿದ್ದಾರೆ. ಆಪ್ತರ ಬೆಂಬಲಕ್ಕೆ ಯಡಿಯೂರಪ್ಪ ಫುಲ್ ಖುಷಿಯಾಗಿದ್ದು, ಸಚಿವರೊಂದಿಗೆ ಭೋಜನ ಸೇವಿಸಿದ್ದಾರೆ.
ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ ವಿಷಯ ಬಹಿರಂಗವಾಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಶಾಸಕರ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಸಿಎಂ ಬಿಡುಗಡೆ ಮಾಡಿದ್ದ ಅನುದಾನಕ್ಕೆ ತಡೆ ನೀಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಈ ವೇಳ ಗರಂ ಆದ ಸಿಎಂ, ಅನುದಾನ ಹಂಚಿಕೆ ಮಾಡಿದ್ದಕ್ಕೆ ರಾಜ್ಯಪಾಲರಿಗೆ, ಹೈಕಮಾಂಡ್‌ಗೆ ದೂರು ನೀಡಿದ್ದಾರೆ, ಏನಾಗಲಿದೆಯೋ ಆಗಲಿ. ಈಶ್ವರಪ್ಪ ಅವರ ಖಾತೆಯನ್ನೇ ಬದಲಿಸಿಬಿಡುತ್ತೇನೆ ಎಂದು ಆಪ್ತರ ಮುಂದೆ ಗುಡುಗಿದ್ದಾರೆ ಎನ್ನಲಾಗಿದೆ. ನಂತರ ಆಪ್ತ ಶಾಸಕರೆಲ್ಲಾ ಸೇರಿಕೊಂಡು ಸಿಎಂ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಅಭಯ ನೀಡಿದ್ದಾರೆ.
ಈಶ್ವರಪ್ಪ ನಡೆ ಪ್ರಶ್ನಿಸಿ ಶಾಸಕರ ತಂಡ ಹೈಕಮಾಂಡ್ ಭೇಟಿ ಮಾಡಲು ಮುಂದಾಗಿದೆ. ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಆಗದ ಕಾರಣ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ, ಕೂಡಲೇ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸಹಿ ಮಾಡಿದ್ದ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟು ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ಳುವ ಅಭಯ ನೀಡಿ ಸಿಎಂಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ಪತ್ರಕ್ಕೆ ಆಕ್ಷೇಪ: ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತ ಸಚಿವರು
ಯಾಕೀಗೆ?
ಇದೇ ಶಾಸಕರ ತಂಡ ಗ್ರಾಮೀಣಾಭಿವೃದ್ಧಿ ಸಚಿವರು ನಮ್ಮ ಕೆಲಸ ಮಾಡಿಕೊಡುತ್ತಿಲ್ಲ. ಅನುದಾನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದರು. ನಂತರ ಸಿಎಂ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದರು. ಇದು ಈಗ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಶಾಸಕರ ಭೇಟಿ ನಂತರ ಸಚಿವರ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಹಿರಿಯ ಸಚಿವರಾದ ಅಶೋಕ್, ಬಸವರಾಜ ಬೊಮ್ಮಾಯಿ, ಬಿಜೆಪಿ ಸೇರಿ ಸಚಿವರಾಗಿರುವ ಬಿ.ಸಿ.ಪಾಟೀಲ್, ಡಾ.ಸುಧಾಕರ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದರು. ಕೆಲಕಾಲ ಮಾತುಕತೆ ನಡೆಸಿದರು.ಈಶ್ವರಪ್ಪ ರಾಜ್ಯಪಾಲರಿಗೆ ದೂರು ಸಲ್ಲಿಸಿದ ನಂತರದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.
ಅಂತಿಮವಾಗಿ ನಾವೆಲ್ಲಾ ನಿಮ್ಮ ಬೆಂಬಲಕ್ಕಿದ್ದೇವೆ. ಅನುದಾನ ಬಿಡುಗಡೆ ಸಿಎಂ ಪರಮಾಧಿಕಾರ, ಕಾನೂನು ಮಿತಿಯಲ್ಲಿಯೇ ಕೆಲಸ ಮಾಡಿದ್ದೀರಿ ಎಂದು ಸಿಎಂ ಯಡಿಯೂರಪ್ಪ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಎಂತಹ ಸನ್ನಿವೇಶ ಎದುರಾದರೂ ಜೊತೆಯಲ್ಲಿ ನಿಲ್ಲುವ ಅಭಯ ನೀಡಿದ್ದಾರೆ.
ಸಚಿವರ ಈ ಮಾತುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫುಲ್ ಖುಷಿಯಾಗಿದ್ದಾರೆ. ನಾಲ್ವರು ಸಚಿವರೊಂದಿಗೆ ರೇಸ್ಕೋರ್ಸ್ ರಸ್ತೆ ಖಾಸಗಿ ತಾರಾ ಹೋಟೆಲ್ಗೆ ತೆರಳಿ ಮಧ್ಯಾಹ್ನದ ಭೋಜನ ಸವಿದಿದ್ದಾರೆ. ಕಳೆದ ರಾತ್ರಿಯಿಂದ ಒಂದು ರೀತಿಯ ದುಗುಡದಲ್ಲಿದ್ದ ಸಿಎಂ ಯಡಿಯೂರಪ್ಪ ಇಂದು ಸಚಿವರು,ಶಾಸಕರ ಬೆಂಬಲ ಕಂಡ ಕೊಂಚ ರಿಲ್ಯಾಕ್ಸ್ ಆದಂತಿದೆ.