ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಇದೀಗ ಎಲ್ಲ ಕಡೆ ಅನ್ಲಾಕ್ ಮಾಡಲಾಗಿದೆ. ನಿಧಾನವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗ್ತಿದ್ದು, ಇದೀಗ ರಾಜ್ಯಾದ್ಯಂತ ಇಂದಿನಿಂದ ಕಲ್ಯಾಣ ಮಂಟಪ ಆರಂಭಕ್ಕೂ ಅವಕಾಶ ಕೊಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, ಅನ್ಲಾಕ್ ಆಗ್ತಿದ್ದಂತೆ ಕೆಲವು ಕಡೆ ಜನರು ಫೇಸ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಇಂದಿನಿಂದ ಕಲ್ಯಾಣ ಮಂಟಪ, ಹೋಟೆಲ್ನಲ್ಲಿ ಸಮಾರಂಭ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಬಹಳಷ್ಟು ಮಂದಿಗೆ ಮನೆಯಲ್ಲಿ ಮದುವೆ ಮಾಡಲು ಆಗೋದಿಲ್ಲ ಅಂತ ಸಿಎಂಗೆ ಮನವಿ ಬಂದಿದ್ದವು. ಆದರೆ, ಹಲವು ಕಡೆ ನಾನು ಗಮನಿಸಿದ ಹಾಗೇ, 500, 1000 ಮೀರಿ ಜನರು ಸೇರುತ್ತಿರುವುದು ಕಂಡು ಬಂದಿದೆ. ಈ ಕುರಿತು ಸಿಎಂ, ಮುಖ್ಯಕಾರ್ಯದರ್ಶಿಯವರೊಂದಿಗೆ ಮಾತನಾಡಿ, ಯಾವ ಜಿಲ್ಲೆಯಲ್ಲಿ ಈ ನಿಯಮ ಉಲ್ಲಂಘನೆ ಆಗುತ್ತೋ, ಅಲ್ಲಿ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳೇ ಹೊಣೆಗಾರಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಶಾಲಾರಂಭ ವಿಚಾರ: ಮಕ್ಕಳ ವಿದ್ಯಾಭ್ಯಾಸ ಮುಖ್ಯ, ಆದರೆ ಶಿಕ್ಷಣಕ್ಕಿಂತ ಹೆಚ್ಚು ಅವರ ಆರೋಗ್ಯವೇ ಮುಖ್ಯ. ಹೀಗಾಗಿ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ಶಾಲಾರಂಭದ ಕುರಿತು ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಏಮ್ಸ್ ನಿರ್ದೇಶಕರು ಪತ್ರ ಬರೆದಿದ್ದು, ಹಂತ ಹಂತವಾಗಿ ಲಾಕ್ ಡೌನ್ ರಿಲೀಸ್ ಮಾಡಬೇಕು. ಹಾಗೆಯೇ ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ತಿಳಿಸಿದ್ದಾರೆ. ಯಾಕೆಂದರೆ ಅನೇಕರಲ್ಲಿ ಅನುಮಾನ ಇದ್ದು, ಎರಡನೇ ಅಲೆ ಸಂಪೂರ್ಣ ಹೋಗಿದ್ಯಾ ಅಥವಾ ಲಾಕ್ಡೌನ್ನಿಂದ ಸೋಂಕು ಇಳಿಕೆ ಆಯ್ತಾ ಎಂಬುದನ್ನ ತಿಳಿಯಲು ಸಮಯಬೇಕು ಎಂದರು.