ಬೆಂಗಳೂರು: ಸಾಮಾಜಿಕ ಜಾಲಾ ತಾಣದ ಮೂಲಕ ತನ್ನಲ್ಲಿರುವ ಮದ್ಯದ ಬಾಟಲ್ ಚಿತ್ರ ಹಾಕಿ ಗ್ರಾಹಕರಿಗೆ ದುಪಟ್ಟು ದರದಲ್ಲಿ ಮಾರಾಟಕ್ಕೆ ಪ್ರಯತ್ನಿಸಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಿರಣ್ ಬಂಧಿತ ಆರೋಪಿ. ಅಬಕಾರಿ ಇಲಾಖೆಯ ಪಶ್ಚಿಮ ವಿಭಾಗದ ಆಯುಕ್ತ ಬಿ.ಆರ್.ಹಿರೇಮಠ್ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಮಾಗಡಿ ರಸ್ತೆಯ ಕೆ.ಎಚ್.ಬಿ ಕಾಲೋನಿ ಬಳಿ ಆರೋಪಿಯನ್ನು ಬಂಧಿಸಿ ಆತನಿಂದ 750 ಮಿ.ಲೀ ಬ್ಲೈಂಡರ್ಸ್ ವಿಸ್ಕಿ ಬಾಟೆಲ್ ಹಾಗೂ ಸ್ಕೂಟರ್ ವಶಪಡಿಸಿ ಕೊಂಡಿದ್ದಾರೆ. ಲಾಕ್ ಡೌನ್ ಇರುವ ಸಂದರ್ಭ ಬಳಸಿಕೊಂಡ ಈತ ಮದ್ಯ ಪ್ರಿಯರಲ್ಲಿ ಆಸೆ ಹುಟ್ಟಿಸಿ 1:3 ಅನುಪಾತದಲ್ಲಿ ಅಂದರೆ ಮೂಲ ಬೆಲೆಗಿಂತ ಮೂರು ಪಟ್ಟು ಜಾಸ್ತಿ ನಿಗದಿ ಮಾಡುತ್ತಿದ್ದ. ಬಳಿಕ ಈ ಕುರಿತು ಬರುತ್ತಿದ್ದ ಬೇಡಿಕೆ ಕರೆಗಳ ಆಧಾರದ ಮೇಲೆ ಬೆಲೆ ಏರಿಸುತ್ತಿದ್ದ ಎನ್ನಲಾಗಿದೆ.
ಡೆಲಿವರಿ ಹೇಗೆ..?: ಈತ ಹೆಚ್ಚಾಗಿ ವಿಜಯನಗರ, ಆರ್ ಪಿಸಿ ಲೇಔಟ್ ಪ್ರದೇಶವನ್ನು ಡೆಲಿವರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ. ಆ ಪ್ರದೇಶದ ಹೆಸರಾಂತ ಹೋಟೆಲ್, ಬಾರ್ ಮುಂತಾದ ಸ್ಥಳ ಮೊದಲೇ ವಾಹನದಲ್ಲಿ ಓಡಾಡಿ ತೊಂದರೆ ಆಗುವುದಿಲ್ಲ ಎಂದು ಮನದಟ್ಟು ಮಾಡಿಕೊಂಡು ಆ ಸ್ಥಳದಲ್ಲಿ ಪ್ಯಾಕ್ ಮಾಡಲಾದ ಬಾಟಲ್ ಇಡುತ್ತಿದ್ದ. ಅದರ ಮೇಲೆ ಹಳೇ ದಿನಪತ್ರಿಕೆ ಹೊದಿಸಿ ಅದರ ಮೇಲೆ ಪತ್ರಿಕೆ ಹಾರಿ ಹೋಗದೆ ಇರುವಂತೆ ಕಲ್ಲು ಇಡುತ್ತಿದ್ದ. ನಂತರ ದೂರದ ಪ್ರದೇಶದಲ್ಲಿರುವ ಗಿರಾಕಿಗೆ ಲೊಕೇಶನ್ ತಿಳಿಸಿ , ಸಮೀಪ ಬರಲು ಹೇಳಿ ಬಾಟಲ್ ಇಡಲಾದ ಜಾಗದ ಹಿಂದಿನ ಪ್ರದೇಶದ ಲೊಕೇಶನ್ ಕೊಡುತ್ತಿದ್ದ. ಗಿರಾಕಿಯಿಂದ ಗೂಗಲ್ ಪೇ ,ಫೋನ್ ಪೇ ಮೂಲಕ ಹಣ ಪಡೆದ ಬಳಿಕ ಬಾಟಲ್ ಒದಗಿಸುತ್ತಿದ್ದ. ಗಿರಾಕಿ ಬಾಟೆಲ್ ತೆಗೆದುಕೊಂಡು ಹೋದದ್ದನ್ನು ನೋಡಿ ನಂತರ ಅಲ್ಲಿಂದ ಹೊರಟು ಹೋಗುತ್ತಿದ್ದ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೊಪಿಯನ್ನು ವಶಕ್ಕೆ ಪಡೆದಿದ್ದಾರೆ.