ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಕಳೆದ ರಾತ್ರಿ ನಡೆದ ಕೆ.ಜಿ.ಹಳ್ಳಿ ಗಲಭೆ, ದುಷ್ಕರ್ಮಿಗಳಿಂದ ತಮ್ಮ ನಿವಾಸದ ಮೇಲೆ ನಡೆದ ದಾಳಿ ಮತ್ತಿತರ ವಿಚಾರಗಳ ಕುರಿತು ಚರ್ಚಿಸಿದರು.
ದೀರ್ಘ ಸಮಾಲೋಚನೆ ನಡೆಸಿದ ಅವರು ತಮಗಾದ ನಷ್ಟ, ಕೃತ್ಯ ಎಸಗಿದವರ ವಿವರ ಹಾಗೂ ಇತರೆ ಮಾಹಿತಿಯನ್ನು ಡಿಕೆಶಿ ಜೊತೆ ಹಂಚಿಕೊಂಡಿದ್ದಾರೆ.
ಕಳೆದ 25 ವರ್ಷಗಳಿಂದ ಇಲ್ಲಿನ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಮ್ಮ ಕುಟುಂಬ ಇಲ್ಲಿ 50 ವರ್ಷದಿಂದ ನೆಲೆಸಿದೆ. ಇದುವರೆಗೂ ಇಂತಹ ಯಾವುದೇ ಘಟನೆ ನಡೆದಿರಲಿಲ್ಲ. ಇದು ಪೂರ್ವ ನಿಯೋಜಿತ ಕೃತ್ಯ ಅಥವಾ ಅನಿರೀಕ್ಷಿತವಾಗಿ ನಡೆದ ಘಟನೆಯ ಎಂಬ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಬೇಕಿದೆ. ಈ ಸಂಬಂಧ ಇಂದು ಕಂದಾಯ ಸಚಿವ ಆರ್ ಅಶೋಕ್ ಹಾಗೂ ಇತರೆ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಸಿಎಂ ಜೊತೆಗೂ ಈ ವಿಚಾರವಾಗಿ ಸಮಾಲೋಚಿಸಿದ್ದೇನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ತಮಗೂ ಒಂದಿಷ್ಟು ಮಾಹಿತಿ ನೀಡುವುದು ಜವಾಬ್ದಾರಿ ಆಗಿರುವ ಹಿನ್ನೆಲೆ ತಮ್ಮನ್ನು ಭೇಟಿ ಮಾಡಿದ್ದೇನೆ ಎಂದು ಅಖಂಡ ಶ್ರೀನಿವಾಸಮೂರ್ತಿ ವಿವರಿಸಿದ್ದಾರೆ.
ಇದೇ ಸಂದರ್ಭ ಡಿಕೆಶಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ತಮ್ಮ ಬೆಂಬಲಕ್ಕೆ ಇರಲಿದೆ. ಯಾರೇ ಕಿಡಿಗೇಡಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪಕ್ಷದ ವತಿಯಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಪಕ್ಷ ಸದಾ ನಿಮ್ಮ ಬೆಂಬಲಕ್ಕೆ ಇರಲಿದೆ ಎಂಬ ಭರವಸೆ ನೀಡಿದ್ದಾರೆ.