ಆನೇಕಲ್, ಬೆಂಗಳೂರು: ಬೊಮ್ಮಸಂದ್ರ-ಜಿಗಣಿ ಹೊರ ವರ್ತುಲ ರಸ್ತೆಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಓರ್ವರನ್ನು ಹಣಕ್ಕಾಗಿ ಅಪಹರಿಸಿದ ಒಂದೇ ಕುಟುಂಬದ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ತಮಿಳುನಾಡಿನ ಚೆನ್ನೈ ಮೂಲದ ಸಾಪ್ಟವೇರ್ ಟೆಕ್ಕಿ ಪಾರ್ಥಿಬನ್ (27), ಆತನ ಪತ್ನಿ ವಸಂತ ಮುತ್ತು, ಆಕೆಯ ಸಹೋದರ ರವಿಚಂದ್ರನ್ ಮತ್ತು ಸ್ನೇಹಿತ ಮಹಮದ್ ಸುಲೇಮನ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಜ.6ರಂದು ಕೆಲಸಕ್ಕೆ ಬೈಕ್ನಲ್ಲಿ ಹೋಗುತ್ತಿದ್ದ ಹರಿಯಾಣ ಮೂಲದ ಯುವತಿಯನ್ನು ಯುವಕರ ಗುಂಪೊಂದು ಅಪಹರಿಸಿತ್ತು. ಈಕೆ ಏರೋಸ್ಪೇಸ್ ಇಂಜಿನಿಯರ್ ಆಗಿದ್ದು, ಎಲೆಕ್ಟ್ರಾನಿಕ್ ಸಿಟಿ ಫೇಸ್- 1ರ ಪಿಜಿಯಲ್ಲಿ ವಾಸವಾಗಿದ್ದರು.
ಪ್ರಕರಣದ ಆರೋಪಿ ಪಾರ್ಥಿಬನ್ ಬೈಕ್ನಲ್ಲಿ ತೆರಳುತ್ತಿದ್ದ ಯುವತಿಯನ್ನು ನಿಲ್ಲಿಸಿ, ಹಿಂದೆ ನೀನು ಅಪಘಾತ ಮಾಡಿದ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ನೋಡಲು ಬಾ ಎಂದು ಹೇಳಿ ಕಾರಿನಲ್ಲಿ ಅಪಹರಿಸಿದ್ದನು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಗಲೇ ಯುವತಿ ತನ್ನ ತಂದೆಗೆ ಕರೆ ಮಾಡಿ ಲೊಕೇಷನ್ ಕಳುಹಿಸಿದ್ದಳು. ಅದರಂತೆ ಯುವತಿಯ ತಂದೆ ಸ್ಥಳಕ್ಕೆ ಬರುವಷ್ಟರಲ್ಲಿ ಆಕೆಯ ಸ್ಮಾರ್ಟ್ ಫೋನ್ ಕಸಿದು ಸಿಮ್ ಅನ್ನು ಬೇಸಿಕ್ ಮೊಬೈಲ್ಗೆ ಹಾಕಿ ತಂದೆಗೆ ಅಪಹರಣ ವಿಚಾರ ತಿಳಿಸಿದ್ದಾರೆ. ಅಲ್ಲದೇ ಕೂಡಲೇ 50 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ, ಕರೆ ಸ್ಥಗಿತಗೊಳಿಸಿದ್ದಾರೆ.
ಅಲ್ಲದೇ ಪೊಲೀಸರಿಗೆ ವಿಚಾರ ತಿಳಿಸಿದರೆ ನಿಮ್ಮ ಆಕೆಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಯುವತಿಯ ತಂದೆ ದೂರು ನೀಡಿದ್ದರು. ಪ್ರಕರಣ ಬೆನ್ನತ್ತಿದ ಜಿಗಣಿ-ಅತ್ತಿಬೆಲೆ ಮತ್ತು ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ಯುವತಿಯ ಮೊಬೈಲ್ನಿಂದ ಸ್ವಿಗ್ಗಿ ಮೂಲಕ ಆಹಾರ ಪಡೆಯುತ್ತಿದ್ದ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ತಿಳಿಸಿದ್ದಾರೆ.
ಹಣಕ್ಕಾಗಿ ಕಿಡ್ನ್ಯಾಪ್: ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿರುವ ಪಾರ್ಥಿಬನ್ ಆರಂಭದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕೆಲಸ ಬಿಟ್ಟು ಬೇಗೂರಿನಲ್ಲಿ ವಾಹನ ಸರ್ವೀಸ್ ಸ್ಟೇಷನ್ ಇಟ್ಟು ನಷ್ಟ ಅನುಭವಿಸಿದ್ದ. ಜತೆಗೆ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಕಂಗಾಲಾಗಿದ್ದ. ಹೀಗಾಗಿ ಹಣಕ್ಕಾಗಿ ಯುವತಿಯನ್ನ ಅಪಹರಿಸಿ ವಾರಗಳ ಕಾಲ ಮನೆಯಲ್ಲೇ ಕೂಡಿ ಹಾಕಿದ್ದ. ಪೊಲೀಸರು ಬೆನ್ನು ಬಿದ್ದಿದ್ದಾರೆ ಎಂದು ತಿಳಿದೊಡನೆ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ 2 ಕಾರು ಹಾಗೂ 2 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಗುಂಡಿನ ಚಕಮಕಿ: ಜಮ್ಮು ಕಾಶ್ಮೀರದಲ್ಲಿ ಉಗ್ರರಿಬ್ಬರನ್ನು ಹೊಡೆದುರುಳಿಸಿದ ಭದ್ರತಾ ಪಡೆ