ಬೆಂಗಳೂರು: ಕೋರ್ಟ್ ಆದೇಶ ಮೀರಿ ಸದಸ್ಯರಲ್ಲದ ವ್ಯಕ್ತಿಗಳಿಗೂ ನಿವೇಶನ ಹಂಚಿಕೆ ಮಾಡಿದ್ದ ಆರೋಪದಲ್ಲಿ ಬೆಂಗಳೂರಿನ ಏರ್‌ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷ, ಆರು ಮಂದಿ ನಿರ್ದೇಶಕರಿಗೆ ತಲಾ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸೊಸೈಟಿಯ ಸದಸ್ಯರಾದ ಎಂ. ಶಶಿಧರನ್ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ಎಂ.ಜಿ. ಉಮಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸೊಸೈಟಿಯ ಅಧ್ಯಕ್ಷ ಕೆ.ಭೂಪಾಲ, ನಿರ್ದೇಶಕರಾದ ಎಸ್.ಎನ್. ಶಿವಮೂರ್ತಿ, ಸೋಮಣ್ಣ, ಎಸ್. ಸದಾಶಿವಪ್ಪ, ಕೆ.ಸಿ. ಸರಳ, ಡಿ. ಶ್ರೀನಿವಾಸ್ ಹಾಗೂ ಸಿ.ಎಚ್. ಶಂಕರ್ ಅವರನ್ನು ದೋಷಿಗಳೆಂದು ಹೈಕೋರ್ಟ್ ತೀರ್ಮಾನಿಸಿದೆ.
ಎಲ್ಲರಿಗೂ ಮೂರು ತಿಂಗಳು ಸಾಧಾರಣ ಜೈಲು ಶಿಕ್ಷೆ ಹಾಗೂ ತಲಾ ಎರಡು ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 15 ದಿನಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಹೈಕೋರ್ಟ್ ಏಕಸದಸ್ಯ ಪೀಠವು 2017 ರಲ್ಲಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಆರೋಪಿತರು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದ್ದಾರೆ. ಆ ಮೂಲಕ ಎರಡು ನಿವೇಶನಗಳನ್ನು ಸೊಸೈಟಿಯ ಸದಸ್ಯರಲ್ಲದ ಮೂರನೇ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ. ಪ್ರಕರಣದ ಏಳೂ ಆರೋಪಿಗಳ ವಿರುದ್ಧದ ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿದೆ. ಹೀಗಾಗಿ ಶಿಕ್ಷೆ ವಿಧಿಸಬಹುದು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ಏರ್‌ಕ್ರಾಫ್ಟ್ ಎಂಪ್ಲಾಯಿಸ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಸದಸ್ಯರು ಮನೆ ನಿರ್ಮಿಸಲು ಅನುಕೂಲವಾಗಲು ನಿವೇಶನ ಹಂಚಿಕೆ ಮಾಡಲು ಜಮೀನು ವಶಪಡಿಸಿಕೊಂಡು ಬಡಾವಣೆ ನಿರ್ಮಿಸಲಾಗಿದೆ. ಆದರೆ, ಸೊಸೈಟಿ ಮತ್ತು ಸದಸ್ಯರು ಕೆಲವೊಂದು ವಿವಾದ ಉಂಟಾಗಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಏಕ ಸದಸ್ಯ ನ್ಯಾಯಪೀಠವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸಹಕಾರ ಇಲಾಖೆ ಜಂಟಿ ನಿರ್ದೇಶಕರಿಗೆ ನಿರ್ದೇಶಿಸಿತ್ತು.
ಅದರಂತೆ, ತನಿಖೆ ನಡೆಸಿದ್ದ ಜಂಟಿ ನಿರ್ದೇಶಕರು, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ 11 ಆರೋಪ ಹೊರಿಸಿ 2012 ರಲ್ಲಿ ವರದಿ ಸಲ್ಲಿಸಿದ್ದರು. ನಂತರ ಹಿರಿಯ ಸದಸ್ಯರ ಪಟ್ಟಿ (ಜೇಷ್ಠತಾ) ಸಿದ್ಧಪಡಿಸಬೇಕು. ಆ ಪಟ್ಟಿಯು ಸರ್ಕಾರದಿಂದ ಅನುಮೋದನೆ ಪಡೆಯುವವರೆಗೂ ನಿವೇಶನ ಹಂಚಿಕೆಗಾಗಿ ಸದಸ್ಯರು ಸಲ್ಲಿಸಿದ ಯಾವುದೇ ಮನವಿ ಪರಿಗಣಿಸಬಾರದು ಎಂದು ಸೊಸೈಟಿಯ ಕಾರ್ಯಕಾರಿ ಸಮಿತಿಗೆ ಜಂಟಿ ನಿರ್ದೇಶಕರು ನಿರ್ದೇಶಿಸಿದ್ದರು.
ಜಂಟಿ ನಿರ್ದೇಶಕರ ನಿರ್ದೇಶನಗಳನ್ನು ಸೊಸೈಟಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿ ಸೊಸೈಟಿಯ ಸದಸ್ಯರು ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅನುಮೋದಿಸಿದ ಸದ್ಯಸರ ಜೇಷ್ಠತಾ ಪಟ್ಟಿ ಅನುಸರಿಸದೆಯೇ ಯಾವುದೇ ನಿವೇಶನ ಹಂಚಿಕೆ ಮಾಡಬಾರದು ಮತ್ತು ಮಾರಾಟ ಕ್ರಯ ಮಾಡಿಕೊಡಬಾರದು ಎಂದು 2017 ರ ಆ. 7 ರಂದು ಮಧ್ಯಂತರ ಆದೇಶ ಮಾಡಿತ್ತು. ಇದನ್ನು ಉಲ್ಲಂಘಿಸಿದ್ದನ್ನು ಪ್ರಶ್ನಿಸಿ ಸೊಸೈಟಿಯ ಸದಸ್ಯರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಆದೇಶ ನೀಡಿದೆ.
ಇದನ್ನೂ ಓದಿ: ಉದ್ಯೋಗದಾತರು - ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್