ಬೆಂಗಳೂರು: ರಾಜ್ಯ ಹೈಕೋರ್ಟ್ನಲ್ಲಿ ಆಂಗ್ಲಭಾಷೆಯೊಂದಿಗೆ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಅನುಷ್ಠಾನ ಮಾಡಬೇಕು ಎಂದು ವಕೀಲರು ಹಾಗೂ ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳು ಬುಧವಾರ ಅಭಿಯಾನ ನಡೆಸಿದರು.
ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಿಂದಿ ದಿವಸ ವಿರೋಧಿ ಅಭಿಯಾನ ನಡೆಸಿ, ಅಭಿಯಾನಕ್ಕೆ ಬೆಂಬಲಿಸುವಂತೆ ವಕೀಲರಿಗೆ ಕರ ಪತ್ರಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ಹೈಕೋರ್ಟ್ನಲ್ಲಿ ವಕೀಲರು ಹಾಗೂ ಕಕ್ಷಿದಾರರಿಗೆ ಸುಲಭವಾಗಿ ಅರ್ಥವಾಗುವಂತೆ, ಸುಲಲಿತವಾಗಿ ಮತ್ತು ನಿರರ್ಗಳವಾಗಿ ಕನ್ನಡ ಭಾಷೆಯಲ್ಲಿ ವಾದ ಮಂಡನೆ ಅವಕಾಶ ಸಿಗುವವರೆಗೂ ಅಭಿಯಾನ ನಡೆಸುವುದಾಗಿ ಹೇಳಿದರು.
ಆಂಗ್ಲ ಭಾಷೆಯ ಜತೆಗೆ ಕನ್ನಡವೂ ಸಂವಿಧಾನಾತ್ಮಕ ಭಾಷೆಯಾಗಿದೆ. ಕನ್ನಡದಲ್ಲಿಯೇ ವಾದ ಮಂಡನೆಗೆ ಅವಕಾಶ ಸಿಕ್ಕಲ್ಲಿ ಸಾಮಾನ್ಯ ಜನತೆಗೆ ಸರಳವಾಗಿ ಅರ್ಥವಾಗಲಿದೆ. ಈ ನಿಟ್ಟಿನಲ್ಲಿ ಸಂವಿಧಾನದ 348ನೇ ವಿಧಿಗೆ ತಿದ್ದುಪಡಿ ಮಾಡಿ ಕನ್ನಡ ಭಾಷೆಯಲ್ಲಿ ವಾದ ಮಂಡನೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ, ವಕೀಲ ಸೂರ್ಯ ಮುಕುಂದರಾಜ್ ಮತ್ತಿತರರಿದ್ದರು.
ಓದಿ: ನಾನಂತೂ ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮಾರಕವಾಗುವ ತೀರ್ಮಾನ ಕೈಗೊಂಡಿಲ್ಲ: ಹೆಚ್ಡಿಕೆ