ಬೆಂಗಳೂರು: ಆತ ಇಡೀ ದೇಶವನ್ನು ಸೈಕಲ್ನಲ್ಲೇ ಸುತ್ತಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದವನು. ಆದರೆ ಆತನಿಗೆ ಬಂದ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನಿಸುತ್ತೆ. ಬೀದಿಗೆ ಬಿದ್ದ ಸಮಾಜ ಸೇವಕ ಕಳ್ಳನಾಗಿದ್ದೇ ದುರಾದೃಷ್ಟಕರ. ಕೈಯಲ್ಲೊಂದು ಬ್ಯಾಗು ತಲೆ ಮೇಲೊಂದು ಟೋಪಿ. ಹೀಗೆ ದೇವರ ಪರಮ ಭಕ್ತನಂತೆ ಬರುವ ಈ ಆಸಾಮಿ, ಭಕ್ತರ ಸಾಲಿನಲ್ಲಿ ನಿಂತು ಅತ್ತ ಇತ್ತ ಕಣ್ಣು ಹಾಯಿಸುತ್ತಾನೆ. ಭಕ್ತಿ ಭಾವದಿಂದ ನಮಿಸುತ್ತಾನೆ. ಚಿಲ್ಲರೆ ಹಣವನ್ನ ಕಾಣಿಕೆಯನ್ನಾಗಿ ಹಾಕಿ ಎರಡ್ಮೂರು ನಿಮಿಷ ಆಗ್ತಿದ್ದಂತೆ ಸೀನ್ ಕಂಪ್ಲೀಟ್ ಚೇಂಜ್. ಕೈ ಮುಗಿದ ದೇವಸ್ಥಾನದಲ್ಲಿನ ದೇವರ ಬೆಳ್ಳಿ ಮುಕುಟವನ್ನೇ ಜೋಳಿಗೆಗೆ ಇಳಿಸಿಕೊಂಡು ಜೈ ಅಂತಾ ಹೊರಟೇ ಬಿಡುತ್ತಾನೆ.
ಜೂನ್ 28 ರ ರಾತ್ರಿ 9.10 ರ ಸಮಯ. ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಂಜಪ್ಪ ಸರ್ಕಲ್ನಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಬಂದಿದ್ದ ಆಸಾಮಿ ರವಿ ನಾಯ್ಡು. ಒಂದೂವರೆ ಕೆಜಿ ತೂಕದ ದೇವರ ಮುಕುಟವನ್ನ ಎಗರಿಸಿ ಎಸ್ಕೇಪ್ ಆಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ವಿವಿ ಪುರಂ ಪೊಲೀಸರು 100 ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿ ರವಿ ನಾಯ್ಡುನನ್ನು ಬಂಧಿಸಿದ್ದಾರೆ. ವಿಪರ್ಯಾಸ ಎಂದರೆ ಇದೇ ರವಿನಾಯ್ಡು 2000 ದಿಂದ 2006ರ ವರೆಗೆ ಸೈಕಲ್ನಲ್ಲೇ ವಿಶ್ವಾದ್ಯಂತ ಸುತ್ತಾಡಿ ಏಡ್ಸ್ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಿದ್ದ.
ಇದನ್ನೂ ಓದಿ: ಹಗಲು 'ನಾವು ಜೇನು ಬಿಚ್ಚುವವರು..' ರಾತ್ರಿ ದೇಗುಲ ಲೂಟಿ ಮಾಡಿದ ಕಳ್ಳರು: ಸಿಸಿಟಿವಿಯಲ್ಲಿ ಕೃತ್ಯ ಸೆರೆ
ರವಿ ನಾಯ್ಡು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಸ್ಥಿತಿ ಕಂಡು ಅಯ್ಯೋ ಅನಿಸಿದೆ. ಸೈಕಲ್ನಲ್ಲಿ ದೇಶ ವಿದೇಶ ಸುತ್ತಿದ ರವಿ ನಾಯ್ಡುಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ ಬೈಕ್ ಒಂದನ್ನ ಗಿಫ್ಟ್ ಮಾಡಿದ್ರಂತೆ. ಹೀಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಸುತ್ತಾಡುತ್ತಿದ್ದವನಿಗೆ ಊಟಕ್ಕೂ ಪರದಾಡುವಂತಹ ಸ್ಥಿತಿ ಉಂಟಾಗಿಬಿಟ್ಟಿತ್ತು. ಈತನ ನೆರವಿಗೂ ಯಾರೊಬ್ಬರು ನಿಲ್ಲಲಿಲ್ಲ. ಹಾಗಾಗಿ ಚಿಂದಿ ಆಯುತ್ತಾ ಅದರಿಂದ ಬರುವ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ತಿದ್ದ. ಹೀಗಿದ್ದವನು ಕಳ್ಳತನದ ಹಾದಿ ಹಿಡಿದು ಅಂದರ್ ಆಗಿದ್ದಾನೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ನೂತನ ಚೌಡೇಶ್ವರಿ ದೇವಾಲಯದ ಹುಂಡಿ ಒಡೆದು ಹಣ ದೋಚಿದ ಖದೀಮರು
''ಠಾಣೆಯ ವ್ಯಾಪ್ತಿಯ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ನಮಗೆ ಮಾಹಿತಿ ಬರುತ್ತೆ. ಅದಾದ ಮೇಲೆ ನಾನು ಎಫ್ಐಆರ್ ದಾಖಲು ಮಾಡಿ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ನೂರು ಸಿಸಿಟಿವಿಯನ್ನು ಚೆಕ್ ಮಾಡಿ ನಾವು ಆರೋಪಿಗಳನ್ನು ಹಿಡಿದಿದ್ದೇವೆ. ಬಂಧಿತ ಆರೋಪಿ ಮೊದಲು ಬೇರೆ ಬೇರೆ ಕಡೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ. ಅಂತೆಯೇ ಈ ದೇವಸ್ಥಾನಕ್ಕೆ ಮಾಮುಲಿ ಬರುತ್ತಿದ್ದ ಹಾಗೂ ಪ್ರಸಾದ ತೆಗೆದುಕೊಳ್ಳುತ್ತಿದ್ದ. ರಾತ್ರಿ ಸಮಯದಲ್ಲಿ ಪ್ರದಕ್ಷಿಣೆಗೆ ಹೋಗಿ ಅಲ್ಲಿ ಯಾರು ಇಲ್ಲದ ಸಮಯ ಮುಕುಟವನ್ನು ತೆಗೆದುಕೊಂಡು ಹೋಗಿದ್ದಾನೆ.
ಅದಾದ ನಂತರ ದೇವಸ್ಥಾನದ ಅಧಿಕಾರಿಗಳು ಹಾಗೂ ಸ್ಥಳೀಯರು ನಮಗೆ ದೂರು ನೀಡಿದರು. ಅದಾದ ನಂತರ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಅವನ ಮುಖ ಹಾಗೂ ದೇಹದ ಸ್ಟೈಲ್ ಸ್ವಲ್ಪ ಯೂನಿಕ್ ಆಗಿತ್ತು. ಹೀಗಾಗಿ ಅವನನ್ನು ಸುಲಭವಾಗಿ ಪತ್ತೆ ಮಾಡಿದ್ದೇವೆ. ಅವನು ಜೀವನೋಪಾಯಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಾನೆ. ಎಲ್ಲಿ ಸುಲಭವಾಗಿ ಬೆಳ್ಳಿ ಸಾಮಾನು ಸಿಗುತ್ತಿತ್ತೋ ಅಲ್ಲಿ ಕಳ್ಳತನ ಮಾಡಿದ್ದ. ಅದು ಬಿಟ್ಟು ಬೇರೆಡೆ ಎಲ್ಲಿ ಕಳ್ಳತನ ಮಾಡಿದ್ದಾನೋ ಎಂಬುದನ್ನು ವಿಚಾರಿಸುತ್ತಿದ್ದೇವೆ'' ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ತಿಳಿಸಿದ್ದಾರೆ.
ಸದ್ಯ ಬಂಧಿತ ರವಿ ನಾಯ್ಡುನಿಂದ ಒಂದೂವರೆ ಕೆಜಿ ತೂಕದ ಬೆಳ್ಳಿ ದೇವರ ಮುಕುಟ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸ್ತಿದ್ದಾರೆ. ಸದ್ಯ ಆರೋಪಿ ರವಿ ನಾಯ್ಡು ಜೈಲು ಪಾಲಾಗಿದ್ದು, ಆತನ ಬಿಡುಗಡೆ ಬಳಿಕ ವಿವಿ ಪುರಂ ಪೊಲೀಸರು ಪೊಲೀಸ್ ಠಾಣೆಯಲ್ಲೇ ಇರಿಸಿಕೊಂಡು ಊಟ, ವಸತಿ ನೀಡಲು ಮುಂದಾಗಿದ್ದಾರೆ. ಆದ್ರೆ ಆರೋಪಿಯಾಗಲ್ಲ ಓರ್ವ ಕೆಲಸಗಾರನಾಗಿ.
ಇದನ್ನೂ ಓದಿ: ಘತ್ತರಗಿ ಭಾಗಮ್ಮ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳವು