ಬೆಂಗಳೂರು: ಸಲಿಂಗಕಾಮಿಗಳ ನಡುವೆ ಉಂಟಾದ ಕಲಹದಲ್ಲಿ ಸ್ನೇಹಿತನ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದಡಿ ತಮಿಳುನಾಡು ಮೂಲದ ಆರೋಪಿಯನ್ನು ಮಾರತ್ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತಮಿಳ್ ವಣ್ಣನ್ (37) ಬಂಧಿತ ಆರೋಪಿ. ಸ್ನೇಹಿತ ರಾಜ್ ಗೋಪಾಲ್ ನನ್ನ ಕೊಲೆ ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಮಿಳ್ ವಣ್ಣನ್ ಹಾಗೂ ರಾಜ್ ಗೋಪಾಲ್ ತಮಿಳುನಾಡಿನ ಮೂಲದವರಾಗಿದ್ದು, ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಗಳಾಗಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಮದುವೆಯಾಗಿತ್ತು. ಸಲಿಂಗಕಾಮ ಸಂಬಂಧ ಹಿನ್ನೆಲೆ ಪತ್ನಿಯರು ದೂರವಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಮಾರತ್ ಹಳ್ಳಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ತಮಿಳು ವಣ್ಣನ್ ಕೆಲಸಕ್ಕೆ ಸೇರಿಕೊಂಡಿದ್ದ.
ರಾಜ್ ಗೋಪಾಲ್ ಸಹ ನಗರದ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಜೂನ್ 4 ರಂದು ಮಾರತ್ ಹಳ್ಳಿಯ ಲಾಡ್ಜ್ವೊಂದಕ್ಕೆ ಜಯಗೋಪಾಲ್ ನನ್ನು ಆರೋಪಿ ಕರೆಯಿಸಿಕೊಂಡಿದ್ದ. ಲೈಂಗಿಕ ಸಂಪರ್ಕ ಬಳಿಕ ಹಣ ಕೊಡುವಂತೆ ಆರೋಪಿಗೆ ಜಯಗೋಪಾಲ್ ಪೀಡಿಸಿದ್ದ ಎನ್ನಲಾಗಿದೆ.
ಇದೇ ವಿಚಾರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು. ಜಗಳ ವಿಕೋಪಕ್ಕೆ ಏರಿ ಜಯಗೋಪಾಲ್ ನನ್ನ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಲಾಡ್ಜ್ ಗೆ ಬೀಗ ಹಾಕಿ ಎಸ್ಕೇಪ್ ಆಗಿದ್ಧಾನೆ. ಜೂನ್ 7 ರಂದು ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಬಾಗಿಲು ತೆರೆದಾಗ ಕೊಲೆಯಾಗಿರುವ ಸಂಗತಿ ಬಯಲಿಗೆ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದ ತಂಡ ತಮಿಳುನಾಡಿನಲ್ಲಿ ತಲೆಮರೆಸಿಕೊಂಡು ಕೆಲ ದಿನಗಳ ಬಳಿಕ ಪೊಲೀಸರು ತಮ್ಮ ಬಗ್ಗೆ ಅನುಮಾನ ಬಂದಿಲ್ಲ ಭಾವಿಸಿ ಮತ್ತೆ ನಗರಕ್ಕೆ ಬಂದಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಓದಿ: ಹಂದಿ ಅಣ್ಣಿ ಕೊಲೆ ಪಾತಕರನ್ನು ಪೊಲೀಸರು ಶೀಘ್ರದಲ್ಲಿಯೇ ಬಂಧಿಸಲಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ