ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಸೇರಿ ಇನ್ನಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದಂತಾಗಿದೆ.
ರಾಗಿಣಿ ಬಂಧನ ಹಿನ್ನೆಲೆಯಲ್ಲಿ ಕೆಲ ಹೊತ್ತಿನಲ್ಲೇ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ. ಬಳಿಕ ವಿಡಿಯೊ ಕಾನ್ಪರೆನ್ಸ್ ಮೂಲಕ ನ್ಯಾಯಾಧೀಶರಿಗೆ 7-14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಳ್ಳಲು ತನಿಖಾಧಿಕಾರಿಗಳು ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ.
ಪ್ರಕರಣದಲ್ಲಿ ನಾಲ್ಕನೇ ಆರೋಪಿ ವಿರೇನ್ ಕನ್ನ ಎಂಬಾತನನ್ನು ದೆಹಲಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನು ಸಹ ನಗರದಲ್ಲಿ ಡ್ರಗ್ಸ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಈತನನ್ನು ಎರಡು ಬಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರ್ಟಿಓ ಸಿಬ್ಬಂದಿ ರವಿಶಂಕರ್ ಆಯೋಜಿಸುವ ಪಾರ್ಟಿಗಳಲ್ಲಿ ರಾಗಿಣಿ ಭಾಗಿಯಾಗುತ್ತಿದ್ದಳು. ಅಲ್ಲದೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಆರೋಪ ಈಕೆಯ ಮೇಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಯಲಹಂಕದ ಬಳಿಯಿರುವ ರಾಗಿಣಿ ನಿವಾಸಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ರಾಗಿಣಿ ಬಳಸುತ್ತಿದ್ದ ನಾಲ್ಕು ಮೊಬೈಲ್ ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದ್ದರು.