ಬೆಂಗಳೂರು: ''ಪದೋನ್ನತಿ ಪಡೆದ ಶಿಕ್ಷಕರು ಮತ್ತು ಉಪನ್ಯಾಸಕರ ವೇತನ ತಾರತಮ್ಯ ಸಮಸ್ಯೆ ಪರಿಹರಿಸಲು ಬಜೆಟ್ ಅಧಿವೇಶನ ಮುಗಿದ ನಂತರ ಹಣಕಾಸು ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಾಲಮಿತಿಯೊಳಗೆ ಚರ್ಚಿಸಲಾಗುವುದು. ಶಿಕ್ಷಕರು, ಉಪನ್ಯಾಸಕರಿಗೆ ನ್ಯಾಯವೊದಗಿಸುವ ಕೆಲಸ ಮಾಡಲಾಗುವುದು'' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ಅವರು, ನಿಯಮ 72 ರ ಅಡಿ ಶಿಕ್ಷಕರ ವೇತನ ತಾರತಮ್ಯ ವಿಷಯ ಪ್ರಸ್ತಾಪಿಸಿದರು. ಪ್ರೌಢಶಾಲೆಗಳಿಂದ ಪದೋನ್ನತಿ ಪಡೆದ ಶಿಕ್ಷಕರು, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕಾಲಮಿತಿ ವೇತನ ಬಡ್ತಿ ನೀಡುತ್ತಿಲ್ಲ. ಸರಕಾರ ಕೂಡಲೇ ಪದೋನ್ನತಿ ಪಡೆದ ಶಿಕ್ಷಕರು/ಉಪನ್ಯಾಸಕರಿಗೆ ಕಾಲಮಿತಿಯೊಳಗೆ ಬಡ್ತಿ ನೀಡಬೇಕು. ಈಗಿರುವ ನಿಯಮದಿಂದ ಸಿನಿಯರ್ಗಳು ಜೂನಿಯರ್ಗಿಂತ ಕಡಿಮೆ ವೇತನ ಪಡೆಯುತ್ತಾರೆ. ಇದು ಶಿಕ್ಷಕರು, ಉಪನ್ಯಾಸರಿಗೆ ಮಾಡುವ ಅಪಮಾನ ಎಂದರು. ನಾರಾಯಣಸ್ವಾಮಿ ಮಾತಿಗೆ ಬಿಜೆಪಿ ಸದಸ್ಯರಾದ ಶಶೀಲ್ ನಮೋಶಿ, ಸಂಕನೂರು, ಜೆಡಿಎಸ್ ನಾಯಕ ಬೋಜೇಗೌಡ ದನಿಗೂಡಿಸಿ ವೇತನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸೇವಾ ಅವಧಿಯಲ್ಲಿ ಯಾವುದೇ ಪದೋನ್ನತಿ ಪಡೆಯದೇ ಇರುವ ಶಿಕ್ಷಕರಿಗೆ ಮಾತ್ರ ಬಡ್ತಿ ಮಂಜೂರಾತಿ ಮಾಡಲು ಅವಕಾಶವಿದೆ. ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಬಡ್ತಿ ಪಡೆದಿದ್ದರೆ ಅವರ ವೇತನ ಬಡ್ತಿ ಮಂಜೂರಾತಿಗೆ ಅವಕಾಶವಿಲ್ಲ. ಇದರಿಂದಾಗಿ ಹಲವಾರು ಪ್ರಕರಣಗಳಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಿಕ್ಷಕರಾಗಿ, ಪ್ರೌಢಶಾಲೆಗಳಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ಹೊಂದಿದವರು ಪದೋನ್ನತಿ ಪಡೆಯದೇ ಇರುವ ಶಿಕ್ಷಕ ಮತ್ತು ಉಪನ್ಯಾಸಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ವಿವರಣೆ ನೀಡಿದರು.
ಈಗ ಸದಸ್ಯರು ಬೇಡಿಕೆ ಇಟ್ಟಿರುವಂತೆ ಕಾಲಮಿತಿಯೊಳಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಇದಕ್ಕೆ ನಿಯಮಗಳಲ್ಲಿ ಅವಕಾಶ ಇಲ್ಲ. ಆದರೂ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡುತ್ತದೆ. ಈಗಿರುವ ಇತಿ ಮಿತಿಯಲ್ಲಿ ಆರ್ಥಿಕ ಇಲಾಖೆ ಒಪ್ಪಿಗೆ ಒಂದು ಕಡೆಯಾದರೆ ಆರನೇ ಆಯೋಗದ ಶಿಫಾರಸುಗಳು ಮತ್ತೊಂದು ಕಡೆ ಇದೆ. ಶಿಕ್ಷಣ ಇಲಾಖೆ ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಕಾಲಮಿತಿಯಲ್ಲಿ ಚರ್ಚಿಸಿ ನ್ಯಾಯವೊದಗಿಸುವ ಕೆಲಸ ಮಾಡಲಾಗುತ್ತದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ ಪರಿಷತ್ ಸದಸ್ಯರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆಯಲಾಗುತ್ತದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಭೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಹಾಯಕ ಪ್ರಾಧ್ಯಾಪಕರ ಪದೋನ್ನತಿ ಕುರಿತು ಚರ್ಚೆ: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನಲ್ಲಿ ನೇಮಕವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಪದೋನ್ನತಿ ನೀಡುವ ಕುರಿತು ಆದಷ್ಟು ಶೀಘ್ರದಲ್ಲೇ ಆರ್ಥಿಕ ಇಲಾಖೆ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿಯಮ 330ರ ಅಡಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, 2015ರ ಪೂರ್ವದಲ್ಲಿ ವೃತ್ತಿ ಪದೋನ್ನತಿ ಪಡೆಯಲು ಅರ್ಹರಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಬೋಧಕ ವರ್ಗದವರ ಪರಿಗಣಿಸುವ ಕುರಿತು ತಜ್ಞರ ಶಿಫಾರಸನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದು, ಈ ಬಗ್ಗೆ ಈಗಾಗಲೇ ಒಮ್ಮೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಇದೀಗ ಮತ್ತೊಮ್ಮೆ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ತಾಂತ್ರಿಕ ಇಲಾಖೆಯನ್ನು ಅಧಿಕಾರಿಗಳು ಸಂಪೂರ್ಣವಾಗಿ ಸಾಯಿಸಿದ್ದಾರೆ. 15 ವರ್ಷದಿಂದ ಸಿ ಅಂಡ್ ಆರ್ ರೂಲ್ ತಿದ್ದುಪಡಿ ಮಾಡಲು ಬಿಟ್ಟಿಲ್ಲ, ಇಲಾಖೆ ಹಾಳು ಮಾಡಿದ್ದು ಸರ್ಕಾರ ಅಲ್ಲ, ಅಧಿಕಾರಿಗಳು, ಎಲ್ಲ ಹಾಳು ಮಾಡಿ ಈಗ ನಿವೃತ್ತಿಯಾಗಿದ್ದಾರೆ. ಹಾಗಾಗಿ ಈ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೇ ಎಚ್ಚರ ವಹಿಸಬೇಕು ಎಂದರು.
ಎಲ್ಲರೂ ಕೆಟ್ಟ ಅಧಿಕಾರಿಗಳು ಇರಲ್ಲ: ಸುಧಾಕರ್ :- ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ಇಲಾಖೆಯಲ್ಲಿ ಎಲ್ಲರೂ ಕೆಟ್ಟ ಅಧಿಕಾರಿಗಳು ಇರಲ್ಲ. ಆರ್ಥಿಕ ಇಲಾಖೆ ಕೆಲ ಅಂಶ ಸರಿಯಾಗಿ ಪರಿಗಣಿಸಿಲ್ಲ ಅನ್ನಿಸುತ್ತಿದೆ. ಅಷ್ಟಕ್ಕೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎನ್ನುವುದು ಸರಿಯಲ್ಲ, ಸಹಾಯಕ ಪ್ರಾಧ್ಯಾಪಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಸಹಾಯಕ ಪ್ರಾಧ್ಯಾಪಕರು ಹಾಗೂ ಶಿಕ್ಷಕರಿಗೆ ತಮ್ಮ ಸೌಲಭ್ಯ ಪಡೆದುಕೊಳ್ಳುವುದು ಅವರ ಹಕ್ಕು, ಆದರೆ, ಸೌಲಭ್ಯ ಪಡೆಯುವವರಲ್ಲಿಯೂ ಬದ್ದತೆ, ಜವಾಬ್ದಾರಿ ಇರಬೇಕಿದೆ. ಈಗ ಸದಸ್ಯರ ಮೂಲಕ ಸರ್ಕಾರದ ಗಮನಕ್ಕೆ ವಿಷಯ ತಂದಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಲಿದೆ. ಆದರೆ, ಸಮಸ್ಯೆ ಪರಿಹಾರಕ್ಕೆ ಕಾಲಮಿತಿ ಹೇಳಲು ಸಾಧ್ಯವಿಲ್ಲ. ಆದರೆ ಇದು ಎಲ್ಲರ ಜವಾಬ್ದಾರಿ, ತ್ವರಿತವಾಗಿ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಚರ್ಚೆ ನಡೆಯುವ ವೇಳೆ ಆಡಳಿತ ಪಕ್ಷದವರ ಗೈರಿನ ವಿಷಯವನ್ನು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಸಭಾನಾಯಕರಿಲ್ಲ, ವಿಪ್ ಇಲ್ಲ, ಮಂತ್ರಿಗಳಿಲ್ಲ, ಸದಸ್ಯರಿಲ್ಲ, ಬರೀ ಐದು ಸದಸ್ಯರಿದ್ದಾರೆ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆಯಾ ಎಂದು ಕಿಡಿಕಾರಿದರು.
ಈ ವೇಳೆ ಸಭಾಪತಿ ಪೀಠದಲ್ಲಿದ್ದ ಶಶಿಲ್ ನಮೋಶಿ ಸದನದಲ್ಲಿ ಇಂದು ಕಡ್ಡಾಯವಾಗಿ ಇರಬೇಕಾದ ಸಚಿವರ ಹೆಸರು ಓದಿದರು. ಅಲ್ಲಿಯವರೆಗೂ ಸದನದಲ್ಲಿ ಸಚಿವರ ಸಾಲಿನಲ್ಲಿ ರಾಮಲಿಂಗಾರೆಡ್ಡಿ ಮಾತ್ರ ಇದ್ದರು. ನಂತರ ಸಭಾನಾಯಕ ಬೋಸರಾಜ್, ಸುಧಾಕರ್ ಬಂದು ಸೇರಿಕೊಂಡರು, ಆಡಳಿತ ಪಕ್ಷದ ಆಸನ ಖಾಲಿ ಇರುವುದನ್ನು ಪ್ರಸ್ತಾಪಿಸಿದ ರವಿಕುಮಾರ್, ಖಾಲಿ ಕುರ್ಚಿಗಳಿಗೆ ನಾವು ಹೇಳಬೇಕಾ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಬೋಸರಾಜ್, ಸಚಿವರು ಕೆಳಮನೆಗೆ ಹೋಗಿದ್ದಾರೆ ಬರುತ್ತಾರೆ. ನಮ್ಮ ಕಡೆ ಕುರ್ಚಿ ಇರಲಿ ನಿಮ್ಮ ಕಡೆಯ ಮುಖ್ಯ ಕುರ್ಚಿಯೇ ಖಾಲಿ ಇದೆ. ಪ್ರತಿಪಕ್ಷ ನಾಯಕರ ಸ್ಥಾನವೇ ಖಾಲಿ ಇದೆಯಲ್ಲ. ಪ್ರತಿಪಕ್ಷ ನಾಯಕ ಇಲ್ಲ. ವಿಪ್ ಇಲ್ಲ ಎಂದು ಟೀಕಿಸಿದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಇದನ್ನೂ ಓದಿ: cloud seeding: ಮೋಡ ಬಿತ್ತನೆ ತಂತ್ರಜ್ಞಾನದ ಕುರಿತು ಚರ್ಚೆ.. ಆಡಳಿತ ಪಕ್ಷದ ಶಾಸಕರ ನಡುವೆಯೇ ಪರ-ವಿರೋಧ