ಬೆಂಗಳೂರು: ಜನರೂ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾನೂನು ಉಲ್ಲಂಘಿಸುವುದರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜನ ಸಹಕಾರ ಕೊಡುತ್ತಿದ್ದಾರೆ. ಜನರಲ್ಲೂ ಅರಿವು ಮೂಡಿದೆ. ಕೊರೊನಾ ಕಳೆದ ಬಾರಿಗಿಂತ ಹೆಚ್ಚು ತೀವ್ರವಾಗಿದೆ. ಪೊಲೀಸರು ಕೂಡ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಎಲ್ಲ ಎಡಿಜಿಪಿ, ಬೆಂಗಳೂರು ಕಮಿಷನರ್ ಜೊತೆಗೂ ಮೀಟಿಂಗ್ ಮಾಡ್ತೇನೆ. ಅಂಥದ್ದೇನೂ ಬಹಳ ಸಮಸ್ಯೆ ಆಗಿಲ್ಲ. ಸ್ಪಷ್ಟಪಡಿಸಿದರು. ಸೋಮವಾರ ಕ್ಯಾಬಿನೆಟ್ ಮೀಟಿಂಗ್ ಇದೆ. ರಾಜ್ಯ ಸರ್ಕಾರ ಒಂದು ಕೋಟಿ ಲಸಿಕೆ ಖರೀದಿಗೆ ಹಣ ಬಿಡುಗಡೆ ಮಾಡಿದೆ. ಎಷ್ಟು ಲಸಿಕೆ ಬೇಕು ಅಷ್ಟಕ್ಕೆ ಹಣ ನೀಡಲು ಸರ್ಕಾರ ಸಿದ್ಧವಿದೆ. ಸಚಿವ ಸಂಪುಟ ಸಭೆಯಲ್ಲಿ ವ್ಯಾಕ್ಸಿನ್ಗೆ ಯಾವ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧರಿಸುತ್ತೇವೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಆದಾಗ ಕೊರತೆ ಸಹಜ. ಆಕ್ಸಿಜನ್ ಉತ್ಪಾದನೆ ಅಷ್ಟೇ ಇದೆ, ಬಳಕೆ ಮಾತ್ರ ಹೆಚ್ಚಾಗಿದೆ. ಆಕ್ಸಿಜನ್ ಸಲುವಾಗಿ ನಿನ್ನೆ ಮೂರು ತಾಸು ಸಭೆ ಮಾಡಿದ್ದೇವೆ. ಸುಮಾರು 800 ಮೆಟ್ರಿಕ್ ಟನ್ ಸರಬರಾಜು ಆಗುತ್ತಿದೆ. ಚೀಫ್ ಸೆಕ್ರೆಟರಿ ಆಕ್ಸಿಜನ್ ಉತ್ಪಾದಕರ ಬಳಿ ಮಾತನಾಡಿ ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ನಮ್ಮ ಪವರ್ ಪ್ಲಾಂಟ್ನಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತೇವೆ. ಕೆಲವು ಸಿಮೆಂಟ್ ಫ್ಯಾಕ್ಟರಿಗಳಲ್ಲೂ ಉತ್ಪಾದನೆ ಆಗಿದ್ದನ್ನು ಮೆಡಿಕಲ್ ಪರ್ಪಸ್ಗೆ ಬಳಸುತ್ತೇವೆ. ಒಟ್ಟಾರೆ ನಮ್ಮ ಪ್ರಯತ್ನ ಮಾಡಿ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದರು. ರೆಮ್ಡೆಸಿವಿರ್ ಕಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಂಡಿದ್ದೇವೆ. ಬೆಂಗಳೂರು ಮೈಸೂರಿನಲ್ಲಿ ಕೆಲವರನ್ನ ಬಂಧಿಸಿದ್ದೇವೆ ಎಂದಿದ್ದಾರೆ.