ಬೆಂಗಳೂರು: ಕಳ್ಳತನ ಮಾಡಲೆಂದೇ ಮುಂಬೈನಿಂದ ಬಂದು ಸೈಲೆಂಟ್ ಆಗಿ ಕೃತ್ಯ ಎಸಗಿ ವಾಪಸಾಗುತ್ತಿದ್ದ ಕುಖ್ಯಾತ ಆರೋಪಿ ಸಲೀಂ ರಫೀಕ್ ಅಲಿಯಾಸ್ ಬಾಂಬೆ ಸಲೀಂ ಮತ್ತು ಆತನ ಸಹಚರ ಯಾಸೀನ್ ಮಕ್ಬೂಲ್ನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 1 ಕೆ.ಜಿ ಚಿನ್ನ ಹಾಗೂ 6.5 ಕೆ.ಜಿ ಬೆಳ್ಳಿ ಸಹಿತ 67 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಸಮಾಜದ ಕಣ್ಣಿಗೆ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳ ಥರ ತೋರ್ಪಡಿಸಿಕೊಳ್ಳುತ್ತಿದ್ದ ಆರೋಪಿಗಳು, ಕಳ್ಳತನ ಅಂತ ಬಂದಾಗ ಫೋನ್‌ಗಳನ್ನು ಬಿಟ್ಟು ಅಖಾಡಕ್ಕಿಳಿಯುತ್ತಿದ್ದರು. ಪ್ರಮುಖ ಆರೋಪಿ ಬಾಂಬೆ ಸಲೀಂ ಕೆಲವು ಕಡೆ ತಾನೇ ಖುದ್ದು ಕಳ್ಳತನಕ್ಕಿಳಿದರೆ, ಇನ್ನೂ ಕೆಲವೆಡೆ ಸಹಚರರ ಮೂಲಕ ಕೃತ್ಯ ಮಾಡಿಸುತ್ತಿದ್ದನು. ಮೊದಲು ಏರಿಯಾಗಳಲ್ಲಿ ಸುತ್ತಾಡುತ್ತ ಯಾವ ಮನೆಗಳಲ್ಲಿ ಯಾರ್ಯಾರು ಇದ್ದಾರೆ, ಸಂಜೆ ಲೈಟ್ ಯಾವಾಗ ಆನ್ ಆಗುತ್ತದೆ, ಎಷ್ಟು ಗಂಟೆಗೆ ಆಫ್ ಆಗುತ್ತದೆ, ಯಾವ ಮನೆಯಲ್ಲಿ ಲೈಟ್ ಆಫ್ ಇದೆ, ಎಂಬುದನ್ನ ಸೂಕ್ಷ್ಮವಾಗಿ ಗಮನಿಸಿ ಖಚಿತಪಡಿಸಿಕೊಂಡ ಬಳಿಕ ಕಳ್ಳತನ ಮಾಡುತ್ತಿದ್ದರು. ಬಳಿಕ ಮುಂಬೈಗೆ ವಾಪಸಾಗುತ್ತಿದ್ದರು.
ಪ್ರಮುಖ ಆರೋಪಿ ಬಾಂಬೆ ಸಲೀಂ ಈ ಹಿಂದೆಯೂ ಸಹ ಬಸವನಗುಡಿ ಠಾಣಾ ಪೊಲೀರಿಂದ ಬಂಧನವಾಗಿ ಸೆರೆವಾಸ ಅನುಭವಿಸಿದ್ದನು. ಸದ್ಯ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದು, ಅಮೃತಹಳ್ಳಿ ಠಾಣೆಯ 4, ಕೊಡಿಗೆಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳ ಹತ್ತು ಪ್ರಕರಣಗಳು ಬಯಲಾಗಿವೆ. ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಕಳೆದ ವರ್ಷದ ಕೆಲವು ತಿಂಗಳಿನಿಂದ ಹಿಡಿದು ಈ ವರ್ಷದ ಜನವರಿ ತಿಂಗಳವರೆಗೆ ನಗರದ ಹಲವು ಭಾಗಗಳಲ್ಲಿ ಸುಮಾರು ಮನೆಗಳ್ಳತನವಾದ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮುಖ್ಯವಾಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಾ ಹೋದಂತೆ ಮುಂಬೈಯಿಂದ ಒಂದು ತಂಡ ಬಂದು ಇಲ್ಲಿ ಒಂದಲ್ಲ ಅನೇಕ ಮನೆಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಮಾಹಿತಿ ಆಧಾರದಲ್ಲಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದಾಗ ಸಲೀಂ ರಫೀಖ್ ಅಲಿಯಾಸ್ ಬಾಂಬೆ ಸಲೀಂ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ.
ಈತನ ವಿರುದ್ಧ ಇಡೀ ದೇಶದಾದ್ಯಂತ ಸುಮಾರು 40 ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ. ಹಾಗಾಗಿ ಬಾಂಬೆ ಸಲೀಂ ಹಾಗೂ ಆತನ ಸಹಚರ ಯಾಸೀನ್ ಮಕ್ಬೂಲ್ ಎಂಬಾತನನ್ನು ನಾವು ಬಂಧಿಸಿದ್ದೇವೆ. ಅವರ ಬಳಿ ಇದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ರಿಕವರ್ ಆದ ಚಿನ್ನದಿಂದ ಮತ್ತೆ ಹತ್ತು ಕೇಸ್ಗಳು ಪತ್ತೆಯಾಗಿವೆ. ಇವಷ್ಟೇ ಅಲ್ಲದೆ ಇನ್ನೂ ಬೇರೆ ಕಡೆಗಳಲ್ಲಿ ಇವರ ಕಳ್ಳತನದ ಕೈಚಳಕ ತೋರಿಸಿದ್ದಾರೆ ಎನ್ನು ಸುಳಿವು ಸಿಕ್ಕಿದೆ. ಅವುಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಮಾಹಿತಿ ಕೊಡುತ್ತಿದ್ದೇವೆ ಎಂದು ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ಕಳ್ಳತನ ಮಾಡಿದ್ದ ಕಳ್ಳರನ್ನು ಎರಡೇ ದಿನದಲ್ಲಿ ಬಂಧಿಸಿದ ಪೊಲೀಸರು