ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ನಗರದ ಜ್ಯುವೆಲ್ಲರಿ ಶಾಪ್ವೊಂದಕ್ಕೆ ನುಗ್ಗಿ ಪಿಸ್ತೂಲ್ ತೋರಿಸಿ ಸಿಬ್ಬಂದಿ ಕೈ - ಕಾಲು ಕಟ್ಟಿ 1.58 ಕೋಟಿ ರೂ ಮೌಲ್ಯದ ಚಿನ್ನಾಭರಣವನ್ನು ಆರೋಪಿಗಳು ದರೋಡೆ ಮಾಡಿದ್ದರು. ವಿಷಯ ತಿಳಿದು ಬೆಂಗಳೂರು ಹಾಗೂ ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 72 ಗಂಟೆಗಳ ಅಂತರದಲ್ಲಿ ಸಿನಿಮೀಯ ಶೈಲಿಯಲ್ಲಿ ನಾಲ್ವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ದೇವರಾಮ್, ರಾಹುಲ್, ರಾಮ್ ಸಿಂಗ್, ಅನಿಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ವಿಷ್ಣುಪ್ರಸಾದ್ ಗಾಗಿ ಶೋಧ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಪ್ರಮುಖ ಆರೋಪಿ ದೇವರಾಮ್ ನಗರದ ಹುಳಿಮಾವಿನಲ್ಲಿ ಹಾರ್ಡ್ವೇರ್ ಹಾಗೂ ಎಲೆಕ್ಟ್ರಿಕಲ್ ಶಾಪ್ ಇಟ್ಟುಕೊಂಡು ವ್ಯವಹಾರದಲ್ಲಿ ಕೈ ಸುಟ್ಟುಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಂದಿದ್ದ. ಈತನ ಸಹಚರರು ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
ರಾಮ್‌ದೇವ್ ಜ್ಯೂವೆಲ್ಲರ್ ಶಾಪ್ ಟಾರ್ಗೆಟ್: ಪರಸ್ಪರ ಪರಿಚಿತರಾಗಿದ್ದ ಆರೋಪಿಗಳು ಒಗ್ಗೂಡಿ ನಗರದ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆ ಮಾಡಲು 20 ದಿನಗಳ ಹಿಂದೆ ಸಂಚು ರೂಪಿಸಿದ್ದರು. ತಮ್ಮ ಬಳಿಯಿದ್ದ ಪಿಸ್ತೂಲ್ ಹಾಗೂ ಗುಂಡುಗಳ ಸಮೇತ ನಗರಕ್ಕೆ ಎಂಟ್ರಿ ಕೊಟ್ಟಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಾಮ್‌ದೇವ್ ಜ್ಯೂವೆಲ್ಲರ್ ಶಾಪ್ ಟಾರ್ಗೆಟ್ ಮಾಡಿಕೊಂಡಿದ್ದರು.
ಇದರಂತೆ ಜುಲೈ 4 ರಂದು ಬೆಳಗ್ಗೆ ಓಪನ್ ಮಾಡಿದ್ದ ಜ್ಯುವೆಲ್ಲರಿ ಶಾಪ್ಗೆ ಗ್ರಾಹಕರ ರೂಪದಲ್ಲಿ ತೆರಳಿದ್ದಾರೆ. ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಸಿಬ್ಬಂದಿಯನ್ನ ಲಾಕರ್ ರೂಮ್ಗೆ ಕರೆದೊಯ್ದು ಕೈಕಾಲು ಕಟ್ಟಿ ಅಂಗಡಿಯಲ್ಲಿದ್ದ 1.58 ಕೋಟಿ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದರು.
ವಿಷಯ ತಿಳಿದು ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಳ ಬೆನ್ನುಬಿದ್ದಿದ್ದರು. ರಾಜಸ್ಥಾನದಲ್ಲಿ ಆರೋಪಿಗಳ ಸುಳಿವು ಪಡೆದಿದ್ದ ಇನ್ಸ್ಪೆಕ್ಟರ್ ನಂಜೇಗೌಡ, ಇನ್ಸ್ಪೆಕ್ಟರ್ ಈಶ್ವರ್ ನೇತೃತ್ವದ ತಂಡ ರಾಜಸ್ಥಾನದಲ್ಲಿ ಅಡಗಿಕೊಂಡಿದ್ದ ಆರೋಪಿಗಳನ್ನ ಪತ್ತೆ ಮಾಡಿ ಬಂಧಿಸಲು ಮುಂದಾದಾಗ ಆ್ಯಕ್ಷನ್ ಸಿನಿಮಾದಂತೆ ಪೊಲೀಸರ ಮೇಲೆ ಆರೋಪಿಗಳಾದ ರಾಮ್ ಸಿಂಗ್ ಮತ್ತು ರಾಹುಲ್ ಗುಂಡಿನ ದಾಳಿ ನಡೆಸಿದ್ದಾರೆ.
ಕಮಿಷನರ್ ಪ್ರತಾಪ್ ರೆಡ್ಡಿ ಮೆಚ್ಚುಗೆ : ಈ ವೇಳೆ ಪೊಲೀಸರು ಏರ್ನಲ್ಲಿ ಫೈರ್ ಮಾಡಿದ್ದರೂ ಬಗ್ಗದ ಆರೋಪಿಗಳನ್ನು ಮೂರು ಕಿಲೋಮೀಟರ್ ಚೇಸ್ ಮಾಡಿ ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ಪೈಕಿ ಓರ್ವ ತಲೆ ಮರೆಸಿಕೊಂಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಈ ಕಾರ್ಯಕ್ಕೆ ಕುದ್ದು ಕಮಿಷನರ್ ಪ್ರತಾಪ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿಯಾದ ದೇವರಾಮ್ ಈ ಹಿಂದೆ ಕೂಡ ನಗರದಲ್ಲಿ ಹಲವು ರಾಬರಿ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜೈಲಿನಿಂದ ಬಂದು ಮತ್ತೆ ದೊಡ್ಡ ಮಟ್ಟದಲ್ಲಿ ಡಕಾಯಿತಿ ಮಾಡಲು ಪ್ಲಾನ್ ಮಾಡಿದ್ದ. ಅದೇ ರೀತಿ ಬಂಧಿತರಾದ ಉಳಿದ ಆರೋಪಿಗಳ ಮೇಲೆಯೂ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.
ಓದಿ: ನಿವೃತ್ತ ಸರ್ಕಾರಿ ನೌಕರರಿಗೂ ಆರೋಗ್ಯ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ