ಬೆಂಗಳೂರು: ರಾಜ್ಯದಲ್ಲಿ ಇವತ್ತು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಏಳು ಮಂದಿ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗ್ಗೆ ಈ ಅಧಿಕಾರಿಗಳ ಮನೆಗಳನ್ನು ಜಾಲಾಡಿದ ಎಸಿಬಿ ಕಂತೆ ಕಂತೆ ನೋಟು, ಚಿನ್ನಾಭರಣಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ರು.
ಎಸಿಬಿ ದಾಳಿಗೊಳಗಾದ ಅಧಿಕಾರಿಗಳು:
1. ದೇವರಾಜ ಕೆ., ಶಿಗ್ಗಾವಿಯ ಸಣ್ಣ ನೀರಾವರಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್
2. ಪಾಂಡುರಂಗ ಗರಗ್, ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕ
3. ಜಯರಾಜ್ ಕೆ.ವಿ., ಮಂಗಳೂರು ಪಾಲಿಕೆ ನಗರ ಯೋಜನೆ ಜಂಟಿ ನಿರ್ದೇಶಕ
4. ಡಾ.ಶ್ರೀನಿವಾಸ್, ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಹೆಚ್ಒಡಿ
5. ಜೆ.ಇ. ಚನ್ನಬಸಪ್ಪ ಅವಟೆ, ಪಿಡಬ್ಲ್ಯೂಡಿ ಇಲಾಖೆ ಮಾಗಡಿ ಉಪವಿಭಾಗ
6. ಡಾ.ವಿಜಯ್ಕುಮಾರ್, ಕೋಲಾರದ ಡಿಹೆಚ್ಒ
7. ಶ್ರೀನಿವಾಸ್, ಧಾರವಾಡದಲ್ಲಿ ಅರಣ್ಯ ಇಲಾಖೆ ಎಸಿಎಫ್
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕಿಮ್ಸ್‌ನ ಮಾಜಿ ನಿರ್ದೇಶಕರಾಗಿದ್ದ ಡಾ.ವಿ.ಶ್ರೀನಿವಾಸ ಅವರ ಬಳ್ಳಾರಿಯ ಮನೆ ಹಾಗೂ ಕೊಪ್ಪಳ ಜಿಲ್ಲೆಯ ಕಿಮ್ಸ್ ಆಸ್ಪತ್ರೆಯ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.
ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ದೇವರಾಜ್ ಕಲ್ಲೇಶ್ಗೆ ಸೇರಿದ ರಾಜೀವ್ ಗಾಂಧಿ ನಗರದಲ್ಲಿರುವ ಮನೆ ಮೇಲೆ ಬೆಂಗಳೂರಿನಿಂದ ಬಂದಿರುವ ಎಸಿಬಿ ಟೀಂ ಪರಿಶೀಲನೆ ನಡೆಸಿದೆ. ದೇವರಾಜ್ ಮನೆಯಲ್ಲಿ ಕೆ.ಜಿಗಟ್ಟಲೆ ಚಿನ್ನಾಭರಣ, ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಇವುಗಳ ಜೊತೆಗೆ 27 ಎಕರೆ ಜಮೀನು ಖರೀದಿ ಮಾಡಿದ ದಾಖಲೆಗಳು ಹಾಗೂ ಅಪಾರ ಪ್ರಮಾಣದ ಚೆಕ್ ಬುಕ್ ಕೂಡ ಈ ಅಧಿಕಾರಿ ಮನೆಯಲ್ಲಿ ಪತ್ತೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಧಾರವಾಡದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಆಗಿರುವ ಶ್ರೀನಿವಾಸ್ ಎಂಬುವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅವರಿಗೆ ಸೇರಿದ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮ ಬಳಿಯ ತೋಟದ ಮನೆ ಮೇಲೆ ದಾಳಿ ನಡೆದಿದೆ. ಧಾರವಾಡ ನಗರದ ಸಾಧನಕೇರಿ ರಸ್ತೆಯಲ್ಲಿರುವ ಶ್ರೀನಿವಾಸ ಅವರ ಮನೆ, ಚಿತ್ರದುರ್ಗ ನಗರದ ವಿದ್ಯಾನಗರದ ಮನೆ, ಬಸವೇಶ್ವರ ಮೆಡಿಕಲ್ ಕಾಲೇಜು ಬಳಿಯ ಮನೆಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಕೋಲಾರದ ಡಿಹೆಚ್ಒ ಡಾ.ವಿಜಯ್ಕುಮಾರ್ಗೆ ಸೇರಿದ ಮುಳಬಾಗಿಲು ಮನೆ, ಖಾಸಗಿ ಆಸ್ಪತ್ರೆ ಮೇಲೆ ಹಾಗೂ ಬೆಂಗಳೂರಿನಲ್ಲಿನ ಅವರ ಫ್ಲಾಟ್ನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕೋಪಯೋಗಿ ಇಲಾಖೆ ಜೂನಿಯರ್ ಇಂಜಿನಿಯರ್ ಚನ್ನಬಸಪ್ಪ ಅವಟೆ ಅವರ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹಳೆ ಜೇವರ್ಗಿ ರಸ್ತೆಯ ಸಿದ್ದೇಶ್ವರ ಕಲ್ಯಾಣ ಮಂಟಪ ಬಳಿ ಇರುವ ಅವಟೆ ಅವರ ಅಪಾರ್ಟ್‌ಮೆಂಟ್, ಚಿಂಚೋಳಿ ತಾಲೂಕಿನ ಮಗದಮಪುರ ಗ್ರಾಮದಲ್ಲಿರುವ ತೋಟದ ಮನೆ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಇನ್ನು ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್ ನಿವಾಸದ ಮೇಲೆ ದಾಳಿ ನಡೆದಿದ್ದು, ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಲಾಗ್ತಿದೆ.