ಬೆಂಗಳೂರು: ಬಿಬಿಎಂಪಿ ಮೇಲಿನ ಎಸಿಬಿ ದಾಳಿ ಅಂತ್ಯವಾಗಿದೆ. ಈ ವೇಳೆ ಮಹತ್ವದ ಮಾಹಿತಿ ಲಭ್ಯವಾಗಿದೆ. 200 ಎಸಿಬಿ ಅಧಿಕಾರಿಗಳನ್ನೊಳಗೊಂಡಂತೆ ಕೇಂದ್ರ ಕಚೇರಿ ಸೇರಿ 33 ಬಿಬಿಎಂಪಿ ಕಚೇರಿಗಳ ಮೇಲೆ ಬೃಹತ್ ದಾಳಿ ನಡೆಸಲಾಗಿತ್ತು.
ಜಾಹೀರಾತು ವಿಭಾಗದ ವಿಷಯಕ್ಕೆ ಬಂದರೆ, 300 ಕೋಟಿ ರೂ. ಒಟ್ಟು ನಷ್ಟ ಕಂಡುಬಂದಿದೆ. ಕಳೆದ ಹಲವು ವರ್ಷಗಳಿಂದ 267 ಕೋಟಿ ರೂ. ಜಾಹೀರಾತು ಕರ ಸಂಗ್ರಹ ಬಾಕಿ ಉಳಿಸಿಕೊಂಡಿದೆ. ಹಾಗೆ ಬಸ್ ತಂಗುದಾಣ ಮತ್ತು ಪಾದಚಾರಿ ಮಾರ್ಗ (ಸ್ಕೈವಾಕ್) ಗೆ ಅಳವಡಿಸಿರುವ ಜಾಹಿರತುಗಳಿಂದ 27 ಕೋಟಿ ರೂ. ಗೂ ಅಧಿಕ ಕರ ಸಂಗ್ರಹ ಮಾಡಿಲ್ಲ. ಹೊಸದಾಗಿ ನಿರ್ಮಿಸಿರುವ ಪಿಪಿಪಿ ಮಾದರಿಯ ಬಸ್ ತಂಗುದಾಣಗಳಲ್ಲಿ ಅಳವಡಿಸಿರುವ ಜಾಹೀರಾತುಗಳಿಂದ 6 ಕೋಟಿ ರೂ. ಕರ ಬಾಕಿ ಇದೆ. ಜಾಹೀರಾತು ವಿಭಾಗದಲ್ಲಿ ನಿಯಮಾನುಸಾರ ಕರ ಸಂಗ್ರಹಿಸದೇ ಸರ್ಕಾರದ ಬೊಕ್ಕಸಕ್ಕೆ 300 ಕೋಟಿಗೂ ಅಧಿಕ ನಷ್ಟ ಉಂಟುಮಾಡಲಾಗಿದೆ.
ಟಿ.ಡಿ.ಆರ್. ವಿಭಾಗ:
ಟಿಡಿಆರ್ ಪಡೆಯುವುದಕ್ಕೆ ಕಳಪೆ ಮಟ್ಟದ (ಕಡಿಮೆ ಗುಣಮಟ್ಟದ) ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.ತಾತ್ಕಾಲಿ ಕಟ್ಟಡಕ್ಕೆ ಹೆಚ್ಚಿನ ಮೊತ್ತದ ಟಿ.ಡಿ.ಆರ್ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಅದೇ ಜಾಗದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕೂಡ ನಡೆಯುತ್ತಿದೆ. ರಸ್ತೆ ಅಗಲೀಕರಣ ಮಾಡಿರುವಂತೆ ಬಿಂಬಿಸಿ ಪರಿಹಾರದ ಮೊತ್ತವನ್ನು ಅಕ್ರಮವಾಗಿ ಮಂಜೂರು ಮಾಡಿದೆ. ಹಾಗೆ ಸರ್ಕಾರದ ಖರಾಬು ಜಮೀನುಗಳಿಗೆ ನಕಲಿ ದಾಖಲಾತಿ ಸೃಷ್ಟಿಸಿ ಟಿ.ಡಿ.ಆರ್ ಮಂಜೂರು ಮಾಡಿಕೊಂಡು ಸರ್ಕಾರಕ್ಕೆ ಅಪಾರ ನಷ್ಟ ಉಂಟು ಮಾಡಲಾಗಿದೆ.
ನಗರ ಯೋಜನಾ ವಿಭಾಗ:
ಕೆರೆಗಳ ಬಫರ್ ಜೋನ್ಗಳಲ್ಲಿ ಅನಧಿಕೃತ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸದೆ ನಕ್ಷೆ ಮಂಜೂರು ಮಾಡಲಾಗಿದೆ.ನಿರ್ಮಾಣ ಹಂತದ ಕಟ್ಟಡಗಳಿಗೆ ಅಕ್ರಮವಾಗಿ ಓ.ಸಿ ಮಾಡಿಕೊಡಲಾಗಿದೆ. 3 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ಪಡೆದು 6 ಅಂತಸ್ತಿನ ಕಟ್ಟಡ ನಿರ್ಮಾಣವನ್ನು ಮಾಡಿಕೊಂಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗೆ ನೂರಾರು ಅಕ್ರಮಗಳು ಈ ದಾಳಿ ವೇಳೆ ಕಂಡುಬಂದಿದ್ದು, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 188 ಮಂದಿಗೆ ಕೋವಿಡ್ ದೃಢ: 12 ಸೋಂಕಿತರು ಸಾವು