ಬೆಂಗಳೂರು:ಮುಸಲ್ಮಾನ ಸಮುದಾಯಕ್ಕೆ ಇದ್ದ ಶೇ 4 ರಷ್ಟು ಮೀಸಲಾತಿಯನ್ನು ಹಿಂಪಡೆದು ವೀರಶೈವ ಲಿಂಗಾಯತರಿಗೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ನಿರ್ಣಯಕ್ಕೆ ಸುಪ್ರೀಂಕೋರ್ಟ್ ನೀಡಿದ ತಾತ್ಕಾಲಿಕ ತಡೆಯಿಂದ ಸರ್ಕಾರಕ್ಕೆ ಯಾವುದೇ ಹಿನ್ನಡೆಯಾಗಿಲ್ಲ, ಅಂತಿಮವಾಗಿ ಸರ್ಕಾರಕ್ಕೆ ಗೆಲುವಾಗಲಿದೆ. ಸಂವಿಧಾನ ಬದ್ದವಾಗಿ ಸರ್ಕಾರ ಮೀಸಲಾತಿ ಪರಿಷ್ಕರಣೆ ಮಾಡಿದೆ ಎಂದು ಸಚಿವ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಮೀಸಲಾತಿ ತೆಗೆದ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆ ತಾತ್ಕಾಲಿಕ ಮಾತ್ರ.ಅದನ್ನು ಸಂಪೂರ್ಣ ಹೊಡೆದು ಹಾಕಿಲ್ಲ. ಮುಸ್ಲಿಂ ಪ್ರವರ್ಗ ಎ, ಬಿ, ಸಿ ಯಲ್ಲೂ ಇದ್ದಾರೆ ಎಂದರು. ನ್ಯಾಯಾಲಯದಲ್ಲೇ ಇದನ್ನು ಪರಿಣಾಮಕಾರಿ ವಾದ ಮಂಡನೆ ಮಾಡಲಾಗುತ್ತದೆ. ಆ ಮೂಲಕ ಸತ್ಯ ಎತ್ತಿ ಹಿಡಿಯುವ ಕೆಲಸ ಮಾಡಲಾಗುತ್ತದೆ. ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಈಗ ಕೋರ್ಟ್ ತಾತ್ಕಾಲಿಕ ತಡೆ ಕೊಟ್ಟಿರಬಹುದು, ಆದರೆ ಅಂತಿಮವಾಗಿ ನ್ಯಾಯಾಲಯದಲ್ಲಿ ನಮ್ಮದೇ ಜಯ ಆಗಲಿದೆ. ಕೋರ್ಟ್ ತಡೆಯಿಂದ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ ಎಂದು ಹೇಳಿದರು.
ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಾಧ್ಯವಿಲ್ಲ: ಸಚಿವ ಅಶ್ವತ್ಥನಾರಾಯಣ್ ಅವರು, ಮೀಸಲಾತಿ ವಿಚಾರದಲ್ಲಿ ಸರ್ಕಾರ ಬಹಳ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಗೆಲುವು ನಮ್ಮ ಕಡೆ ಆಗುವಂತೆ ವಾದ ಮಾಡಲಿದ್ದೇವೆ. ನಿಮಗೇ ಗೊತ್ತು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಸಾಧ್ಯವಿಲ್ಲ. ಹಾಗಾಗಿ ಇದರ ವಿರುದ್ಧ ಸಮರ್ಥವಾಗಿ ವಾದ ಮಾಡುತ್ತೇವೆ. ಎಲ್ಲ ಜಾತಿ ಜನರ ಪರವಾಗಿ ವೀರಶೈವ ಲಿಂಗಾಯತ, ಒಕ್ಕಲಿಗ ಎಲ್ಲ ಸಮುದಾಯಕ್ಕೆ ಸಲ್ಲುವಂತೆ ಮೀಸಲಾತಿ ಕೊಟ್ಟಿದ್ದು ಬಿಜೆಪಿ ಎಂದು ಹೇಳಿದರು.
ನಾವು ಜಯ ಪಡೆದೇ ಪಡೆಯುತ್ತೇವೆ. ಸಂಪೂರ್ಣ ಶೇ. 4 ಮೀಸಲಾತಿಯನ್ನು ಶೇ.2 ರಂತೆ ಲಿಂಗಾಯತ ಹಾಗೂ ಒಕ್ಕಲಿಗರಿಗೆ ನೀಡಲಾಗಿದೆ. ಮೀಸಲಾತಿ ನೀಡಿರುವುದು ಸರಿ ಇದೆ.2 ಬಿ ನಲ್ಲಿ ಇದ್ದವರನ್ನು ಇಡಬ್ಲ್ಯುಎಸ್ಗೆ ಸೇರಿಸಲಾಗಿದೆ ಎಂದು ಸರ್ಕಾರದ ಮೀಸಲಾತಿ ಪರಿಷ್ಕರಣೆ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕನ್ನಡಿಗರೇ ಸಿಎಂ:ಪ್ರತಿಯೊಬ್ಬ ಕನ್ನಡಿಗನಿಗೂ ಸಿಎಂ ಆಗುವ ಅರ್ಹತೆ ಇದೆ.ಆಯಾ ಸಮುದಾಯದವರು ತಮ್ಮ ತಮ್ಮ ಅಭಿಪ್ರಾಯ ಹೇಳ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ನಮ್ಮ ಪಾರ್ಟಿ ಎಲ್ಲ ಜಾತಿಯೊಂದಿಗೂ ಇದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಫೈನಲ್ ಯಾರು ಸಿಎಂ ಆಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ಪಾರ್ಟಿ ಶಾಸಕರೇ ಸಿಎಂ ಆಗುತ್ತಾರೆ. ಕನ್ನಡಿಗರೇ ಸಿಎಂ ಆಗುತ್ತಾರೆ ಎಂದು ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಮನೆಯಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, ಸಮುದಾಯದ ನಾಯಕರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊನೆಗೆ ನಿರ್ಧಾರ ಮಾಡೋದು ಪಕ್ಷ, ಹೈಕಮಾಂಡ್. ಪಕ್ಷದಲ್ಲಿ ಎಲ್ಲ ಜಾತಿಯವರು ಇರುತ್ತಾರೆ. ಎಲ್ಲ ಸಮುದಾಯಕ್ಕೆ ಸಮಾನತೆ ನೀಡೋದು ಬಿಜೆಪಿ ಪಕ್ಷ. ನಮ್ಮ ಪಕ್ಷ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಸಾಮಾನ್ಯ ಕಾರ್ಯಕರ್ತ. ಪಕ್ಷ ಏನು ಕೊಡಲಿದೆ ಅದಕ್ಕೆ ನಾನು ಬದ್ದನಾಗಿರುತ್ತೇನೆ, ಪಕ್ಷದ ಸೂಚನೆ ಪಾಲಿಸುವುದಷ್ಟೇ ನನ್ನ ಕೆಲಸ ಎಂದರು.
ಇದನ್ನೂಓದಿ:ಲಿಂಗಾಯತರ ಮತ ಸೆಳೆಯಲು ಬಿಎಸ್ವೈ ಪ್ಲಾನ್: ವೀರಶೈವ ಸಮಾಜದ ಸ್ನೇಹಮಿಲನ