ಬೆಂಗಳೂರು: ಭೂತಾನ್ನಿಂದ ಅಡಕೆ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿತು. ಹಿರಿಯ ವಕೀಲರುಗಳಾದ ಬ್ರಿಜೇಶ್ ಕಾಳಪ್ಪ ಹಾಗೂ ಕೆ.ದಿವಾಕರ್ ಅವರು ನಿಯೋಗದಲ್ಲಿ ಇದ್ದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, ಭಾರತಕ್ಕೆ 15,000 ಕ್ವಿಂಟಾಲ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ನಿರ್ಧಾರವು ಕರ್ನಾಟಕದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಅಡಿಕೆ ಬೆಳಗಾರರನ್ನು ಚಿಂತೆಗೀಡುಮಾಡಿದೆ. ಕಾಳುಮೆಣಸು ಬೆಳಗಾರರಿಗೆ ಆದ ಅನ್ಯಾಯವು ಅಡಿಕೆ ಬೆಳಗಾರರಿಗೂ ಆಗಲಿದೆ ಎಂದು ತಿಳಿದ ನಂತರ ನಮ್ಮ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ನಮ್ಮ ಪ್ರಯತ್ನವು ಯಶಸ್ವಿಯಾಗಲಿಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ನೀವು ಮಧ್ಯಪ್ರವೇಶಿಸಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಅಡಕೆ, ಕಾಳುಮೆಣಸು ಬೆಳೆಗಾರರ ಭವಿಷ್ಯದ ಜೊತೆ ಕೇಂದ್ರ ಸರ್ಕಾರದ ಚೆಲ್ಲಾಟ: ಎಎಪಿ ಆಕ್ರೋಶ
ಮೇಕ್ ಇನ್ ಇಂಡಿಯಾ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ವಿರುದ್ಧವಾಗಿ ವಿದೇಶದಲ್ಲಿ ಬೆಳೆದ ಅಡಕೆ, ಕಾಳುಮೆಣಸನ್ನು ಭಾರತಕ್ಕೆ ತರಿಸಿ, ʻಎಲ್ಲಾದರೂ ಬೆಳೆಯಿರಿ, ಭಾರತಕ್ಕೆ ತನ್ನಿʼ ಎಂಬ ನೀತಿಯನ್ನು ಅನುಸರಿಸುತ್ತಿರುವುದೇಕೆ?, ರಾಜಕೀಯ ಪ್ರಭಾವಿಗಳು ಇದರಲ್ಲಿ ಭಾಗಿಯಾಗಿ ಸಫೆಮಾ, ಫೆರಾ ಮುಂತಾದ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬರುತ್ತಿದ್ದು, ಜಾರಿ ನಿರ್ದೇಶನಾಲಯದಿಂದ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಎಎಪಿ ಮುಖಂಡರು ಹಾಗೂ ಹಿರಿಯ ವಕೀಲರಾದ ಬ್ರಿಜೇಶ್ ಕಾಳಪ್ಪ ಮಾತನಾಡಿ, ನಮ್ಮಲ್ಲಿ ಬೆಳೆಯುವ ಅಡಕೆಗೆ ಹೋಲಿಕೆ ಮಾಡಿದರೆ ಭೂತಾನ್ನಿಂದ ಆಮದು ಮಾಡಿಕೊಳ್ಳುವ ಅಡಕೆಯು ಕಳಪೆ ಗುಣಮಟ್ಟದ್ದಾಗಿರಲಿದೆ. ಅದೇ ರೀತಿ, ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುವ ಕಾಳು ಮೆಣಸು ನಮ್ಮಲ್ಲಿ ಬೆಳೆಯುವ ಕಾಳುಮೆಣಸಿಗಿಂತ ಕಳಪೆ ಗುಣಮಟ್ಟದ್ದಾಗಿದೆ.
ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಆಮದು ಮಾಡಿಕೊಂಡ ಅವುಗಳು ಮಿಶ್ರವಾಗುವುದರಿಂದ ಭಾರತದ ಅಡಿಕೆ ಹಾಗೂ ಕಾಳುಮೆಣಸು ಕಳಪೆ ಗುಣಮಟ್ಟದ್ದೆಂಬ ತಪ್ಪು ಕಲ್ಪನೆ ಗ್ರಾಹಕರಲ್ಲಿ ಮೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಡಿಕೆ ಆಮದಿಗೆ ಕಡಿವಾಣ ಹಾಕಲು ಕೇಂದ್ರದಿಂದ ಕಠಿಣ ನಿರ್ಧಾರ: ನಳಿನ್ ಕುಮಾರ್ ಕಟೀಲು
ಕರ್ನಾಟಕದಲ್ಲಿ ವಾರ್ಷಿಕ 36,000 ಮೆಟ್ರಿಕ್ ಟನ್ ಕಾಳುಮೆಣಸು ಬೆಳೆಯಲಾಗುತ್ತಿದೆ. ಆಮದಿಗೂ ಮೊದಲು 850 ರೂಪಾಯಿ ಇದ್ದ ಬೆಲೆಯು 500 ರೂಪಾಯಿಗೆ ಕುಸಿದಿರುವುದರಿಂದ ಬೆಳೆಗಾರರಿಗೆ ಕೆಜಿಗೆ 350 ರೂಪಾಯಿ ನಷ್ಟವಾಗುತ್ತಿದೆ. ಅಂದರೆ ರೈತರಿಗೆ ಒಟ್ಟು 1.26 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಕಾಳುಮೆಣಸಿನ ಹಿಂದಿನ ಬೆಲೆಗೂ ಆಮದಿಗೆ ಅವಕಾಶ ನೀಡಿದ ನಂತರದ ಬೆಲೆಗೂ ಹೋಲಿಕೆ ಮಾಡಿದರೆ ಗುತ್ತಿಗೆದಾರರು ಆರೋಪಿಸಿರುವಂತೆ ಶೇ 40ರಷ್ಟು ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಇದನ್ನೂ ಓದಿ: ಅಡಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಕೇಂದ್ರದ ಹುನ್ನಾರ: ಹೆಚ್ಡಿಕೆ
ಎಎಪಿ ಮುಖಂಡ ಹಾಗೂ ಹಿರಿಯ ವಕೀಲ ಕೆ.ದಿವಾಕರ್ ಮಾತನಾಡಿ, ದೇಶಕ್ಕೆ ಅಗತ್ಯ ಇರುವಷ್ಟು ಅಡಕೆ ಹಾಗೂ ಕಾಳುಮೆಣಸು ನಮ್ಮಲ್ಲೇ ಉತ್ಪಾದನೆಯಾಗುತ್ತಿದ್ದರೂ ವಿದೇಶಗಳಿಂದ ಆಮದಿಗೆ ಮುಂದಾಗಿರುವುದು ಅವುಗಳ ಬೆಳೆಗಾರರನ್ನು ಸಹಜವಾಗಿಯೇ ಚಿಂತೆಗೀಡುಮಾಡಿದೆ. ಒಂದು ವೇಳೆ ಅಡಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಇವುಗಳಿಗೆ ವಿಧಿಸಬೇಕು.
ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಆಮದುದಾರರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.