ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಮ್ಮ 7ನೇ ಬಜೆಟ್ ಮಂಡನೆ ಮಾಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
2020ರ ಆಯವ್ಯಯ ಮಂಡನೆ ವೇಳೆ ಹಲವು ಯೋಜನೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದು, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ 3060 ಕೋಟಿ ರೂ, ನೇಕಾರರ ಸಾಲಮನ್ನಾ ಯೋಜನೆಗೆ 79.57 ಕೋಟಿ ರೂ, ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದವರ ಆಶ್ರಯದಲ್ಲಿ ಕೃಷಿ ನಾವಿನ್ಯತಾ ಕೇಂದ್ರ ಸ್ಥಾಪನೆಗೆ 20 ಕೋಟಿ ರೂ. ಅನುದಾನ ಹಾಗೂ 2020-21 ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ಪ್ರಚೋದನೆಗಾಗಿ ಒಟ್ಟು 55,732 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಬಜೆಟ್ನಲ್ಲಿ ಘೋಷಿಸಿದ್ದಾರೆ.
ಗ್ರಾಮೀಣ ರಸ್ತೆಗಳ ಸುಧಾರಣೆ: ಇನ್ನು ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಗ್ರಾಮೀಣ ಸುಮಾರ್ಗ ಯೋಜನೆ ಜಾರಿಗೊಳಿಸಿದ್ದು, ಐದು ವರ್ಷದಲ್ಲಿ 20,000 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿ ಗೆ ಒತ್ತು ನೀಡಿಲಾಗಿದ್ದು, ಒಟ್ಟು ಈ ಯೋಜನೆಗೆ 780ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ, ಇದಕ್ಕಾಗಿ ಒಟ್ಟು 100 ಕೋಟಿ ರೂ. ಅನುದಾನ ನೀಡಲಾಗಿದೆ.
ಎಲೆಕ್ಟ್ರಿಕಲ್ ವೆಹಿಕಲ್ ಬಳಕೆಗೆ ಹೆಚ್ಚಿನ ಒತ್ತು: ರಾಮನಗರದ ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸ್ಥಾಪನೆಗೆ ನಿರ್ಧರಿಸಿದ್ದು, ಇದಕ್ಕಾಗಿ 10 ಕೋಟಿ ರೂ. ಅನುದಾನ. ಹಾಗೂ ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಒತ್ತು, ಹಾಗೂ ಹಾವೇರಿಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
10 ಹೆಚ್ಪಿ ಪಂಪ್ಸೆಟ್ಗಳಿಗೆ ವಿದ್ಯುತ್ ಶುಲ್ಕ ಮರುಪಾವತಿ: ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಫ್ಲೂ ಗ್ಯಾಸ್ ಡಿ ಸಲ್ಫರೈಸೇಷನ್ ವ್ಯವಸ್ಥೆಯನ್ನು ಒಟ್ಟು 2,510 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದಲ್ಲದೆ ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 HP ವರೆಗಿನ ಪಂಪ್ ಸೆಟ್‌ಗಳ ವಿದ್ಯುತ್ ಶುಲ್ಕ ಮರುಪಾವತಿಸಲು ಯೋಜನೆ ರೂಪಿಸಲು ನಿರ್ಧಾರವನ್ನು ಬಜೆಟ್ನಲ್ಲಿ ಕೈಗೊಳ್ಳಲಾಗಿದೆ.
25 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 400 ಕೋಟಿ: ಇನ್ನು ಬಹು ಅವಶ್ಯವಾಗಿರುವ ಆನಂದ್ ರಾವ್ ವೃತ್ತದಲ್ಲಿ ಸರ್ಕಾರಿ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ತರಲು 25 ಅಂತಸ್ತಿನ ಬಹುಮಹಡಿ ಅವಳಿ ಗೋಪುರವನ್ನು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಧಾರವಾಡ- ಬೆಳಗಾವಿ ನಡುವೆ ಕಿತ್ತೂರಿನ ಮೂಲಕ ರೈಲು ಮಾರ್ಗ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ನಿರ್ಧರಿಸಿದ್ದು, ಶೇ. 50 ರಷ್ಟು ಕಾಮಗಾರಿ ವೆಚ್ಚ ಭರಿಸಲು ಒಪ್ಪಿಗೆ ನೀಡಲಾಗಿದೆ. ಹಾಗೂ ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಕಾಳಿ, ಶರವಾತಿ, ಹಂಗಾರಕಟ್ಟೆ, ಗುರುಪುರ ಮತ್ತು ನೇತ್ರಾವತಿ ಜಲಸಾರಿಗೆ ಮಾರ್ಗ ಹಾಗೂ ದ್ವೀಪಗಳ ಅಭಿವೃದ್ದಿಗಾಗಿ ಕಾರ್ಯಕ್ರಮ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನುಳಿದಂತೆ ರಾಜ್ಯದಲ್ಲಿ ಇನ್ನೋವೇಷನ್ ಹಬ್ ಸ್ಥಾಪನೆಗೆ 4 ಕೋಟಿ ರೂ ಅನುದಾನ ನೀಡಿಲಾಗಿದ್ದು, ಪಂಚಾಯತ್ ರಾಜ್ ಆಯುಕ್ತಾಲಯ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗೂ ಈ ಬಾರಿಯ ಆಯವ್ಯದಲ್ಲಿ ಮದ್ಯದ ಮೇಲಿನ ಸಂಕವನ್ನು ಹೆಚ್ಚಿಸಿದ್ದು, ಪ್ರಸ್ತುತ ದರಕ್ಕಿಂತ ಶೇ.6 ರಷ್ಟು ದರ ಹೆಚ್ಚಿಸಲಾಗಿದೆ.