ಬೆಂಗಳೂರು: ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪನೆಗೆ ಸಿಎಂ ನಿರ್ಧರಿಸಿರುವುದು ದುರುದ್ದೇಶದಿಂದ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ರಾಜಕೀಯಕ್ಕಾಗಿ ಮತ್ತೊಂದು ಬಸವಣ್ಣನ ಪ್ರತಿಮೆ ಬೇಡ, ಈಗಾಗಲೇ ಬಸವಣ್ಣನ ಪ್ರತಿಮೆ ಇದೆ.
ಈಗ ಇದ್ದಕಿದ್ದ ಹಾಗೆ ಬಸವಣ್ಣನ ಪ್ರತಿಮೆ ಸ್ಥಾಪಿಸಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಚಿಂತನೆ ಏನು? ಅದರ ಹಿಂದಿನ ರಾಜಕೀಯ ಉದ್ದೇಶವಾದರೂ ಎಂಥದ್ದು? ವಿಧಾನಸೌಧ ಈಗ ಭ್ರಷ್ಟರ ಸೌಧವಾಗಿದೆ, ಸರ್ಕಾರದ ಕೆಲಸ ದೇವರ ಕೆಲಸ ಹೋಗಿ ಸರ್ಕಾರದ ಕೆಲಸ ಲಂಚದ ಕೆಲಸ ಎನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮಹಾಮಹಿಮ ಬಸವಣ್ಣನವರ ಪ್ರತಿಮೆ ವಿಧಾನಸೌಧದಲ್ಲಿ ಮಾಡುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿ ವಾಟಾಳ್ ನಾಗರಾಜ್ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನ ಕಂಚಿನ ಪ್ರತಿಮೆಯ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿದ ಅವರು, ’’ನಾನು ನಿಂತಿರುವಂತ ಸ್ಥಳ ಬಹಳ ಪವಿತ್ರವಾಗಿದೆ. ಇದು ವಿಧಾನಸೌಧಕ್ಕೆ ತುಂಬಾ ಹತ್ತಿರದಲ್ಲಿರುವ ವಿಶ್ವ ಮಾನವರಾದ ಬಸವಣ್ಣನವರ ಪ್ರತಿಮೆಯಾಗಿದ್ದು, 40 ವರ್ಷದ ಹಿಂದೆ ಉದ್ಘಾಟನೆಯಾಗಿದೆ. ಅಂದಿನ ರಾಷ್ಟ್ರಪತಿಯಾಗಿದ್ದ ಕೆ.ಆರ್.ನಾರಾಯಣ್ ಈ ವಿಗ್ರಹವನ್ನು ಉದ್ಘಾಟಿಸಿದ್ದರು.
ಇಂತಹ ಅದ್ಭುತವಾದ ಕಂಚಿನ ಪ್ರತಿಮೆಯಿದ್ದರೂ ಯಡಿಯೂರಪ್ಪ ವಿಧಾನಸೌಧದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಇದುವರೆಗೆ ಯಾಕೆ ಮಾಡಲಿಲ್ಲ, ಈಗ ಮಾಡಲು ಹೊರಟಿರುವ ಉದ್ದೇಶ ರಾಜಕೀಯ, ಅಧಿಕಾರ ಉಳಿಸಿಕೊಳ್ಳಲು, ಸ್ವಾರ್ಥಕ್ಕಾಗಿ ಮಾತ್ರ ಎಂದು ಕಿಡಿಕಾರಿದರು.
ಇದನ್ನೂ ಓದಿ:ಶಾಸಕ ಪರಮೇಶ್ವರ್ ನಾಯ್ಕ್ ಸಹೋದರನಿಂದ ವೃದ್ಧನ ಮೇಲೆ ಕಬ್ಬಿಣದ ಹಾರೆಯಿಂದ ಹಲ್ಲೆ
ವಿಧಾನಸೌಧ ಈಗ ಭ್ರಷ್ಟರ ಸೌಧ, ನೀವು ಭ್ರಷ್ಟ ಮುಖ್ಯಮಂತ್ರಿ, ನಿಮ್ಮ ಮಂತ್ರಿಮಂಡಲ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ನಿಮ್ಮ ಕೈಯಲ್ಲಿ ಬಸವಣ್ಣನ ಪ್ರತಿಮೆ ಅದೂ ವಿಧಾನಸೌಧದಲ್ಲಿ ಆಗಬಾರದು. ನೀವು ಅಧಿಕಾರ ಉಳಿಸಿಕೊಳ್ಳಲು, ಸಿಎಂ ಆಗಿ ಮುಂದುವರೆಯಲು ಬಸವಣ್ಣನ ಪ್ರತಿಮೆ ಮಾಡಲು ಹೊರಟಿದ್ದೀರಿ ಇದನ್ನು ನೇರವಾಗಿ ವಿರೋಧ ಮಾಡುತ್ತೇನೆ. ಇಡೀ ಕರ್ನಾಟಕ ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ ಎಂದರೆ ಅದು ಯಡಿಯೂರಪ್ಪ ಮಾತ್ರ ಎಂದು ವಾಗ್ದಾಳಿ ನಡೆಸಿದರು.