ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಲು ಪ್ರೇರೇಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ತನಿಖಾಧಿಕಾರಿಗಳನ್ನೇ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಸಿಸಿಬಿ ಪೊಲೀಸರು ನ.16 ರಂದು ಸಂಪತ್ ರಾಜ್ ಅವರನ್ನು ಬಂಧಿಸಿದ್ದರು. ಆ ದಿನವೇ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿದ್ದರು. ಈ ವೇಳೆ ಸಣ್ಣ ಪುಟ್ಟ ಸಮಸ್ಯೆ ಬಿಟ್ಟರೆ ಅಡ್ಮಿಟ್ ಆಗುವ ಅವಶ್ಯಕತೆಯಿಲ್ಲ ಎಂದು ಆಸ್ಪತ್ರೆಯ ಮೂಲಗಳು ಅಧಿಕಾರಿಗಳಿಗೆ ತಿಳಿಸಿದ್ದರು.
ಇದಾದ ಬಳಿಕ ಮಾರನೇ ದಿನ ಮೆಡಿಕಲ್ ಚೆಕಪ್ ಮಾಡಿಸದೇ ನೇರವಾಗಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಅಧಿಕಾರಿಗಳು, ಸಿಸಿಹೆಚ್ನ 67ನೇ ಕೋರ್ಟ್ಗೆ ಹಾಜರು ಪಡಿಸಿ, ಸಂಪತ್ ರಾಜ್ ಅವರನ್ನ ಕಸ್ಟಡಿಗೆ ಪಡೆದು ನಂತರ, ಅವಧಿ ಮುಗಿದ ಮೇಲೆ ಮತ್ತೆ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ಈ ವೇಳೆ, ಅಧಿಕಾರಿಗಳನ್ನ ಕೋರ್ಟ್ನಲ್ಲಿ ಸಿಲುಕಿಸಿದ ಸಂಪತ್ ತನಗೆ ಆರೋಗ್ಯ ಸರಿ ಇಲ್ಲದಿದ್ದರೂ ರಾತ್ರಿ ಇಡೀ ವಿಚಾರಣೆ ನಡೆಸಿದ್ದಾರೆ ಎಂದು ಕೋರ್ಟ್ ನಲ್ಲಿ ಆರೊಪಿಸಿದ್ದರು.
ಓದಿ:ನಿಶ್ಚಿತಾರ್ಥವಾದ ಎರಡೇ ದಿನಕ್ಕೆ ಯುವತಿ ಆತ್ಮಹತ್ಯೆ
ಇದರಿಂದ ಗರಂ ಆಗಿದ್ದ ನ್ಯಾಯಾಧೀಶೆ ಕಾತ್ಯಾಯಿನಿ ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಯಾಕೆ ಫಾಲೋ ಮಾಡಿಲ್ಲ. ಆರೋಪಿ ಆರೋಗ್ಯ ಸರಿ ಇಲ್ಲ ಅಂದರೂ ವಿಚಾರಣೆ ಯಾಕೆ ನಡೆಸಿದ್ದೀರಿ, ಇದು ತಪ್ಪಲ್ಲವೇ, ಆರೋಗ್ಯ ಸರಿಯಿಲ್ಲ ಎಂದಾದಲ್ಲಿ ಅವರನ್ನ ಆಸ್ಪತ್ರೆಗೆ ಕಳುಹಿಸಬೇಕಿತ್ತು ಎಂದು ಸಿಸಿಬಿಗೆ ಪ್ರಶ್ನೆ ಮಾಡಿದರು.
ಸದ್ಯ ನಿಯಮ ಪಾಲಿಸದೇ ವಿಚಾರಣೆ ನಡೆಸಿದ ಬಗ್ಗೆ, ಮಾಹಿತಿ ನೀಡಲು ನೋಟಿಸ್ ನೀಡುವ ಸಾಧ್ಯತೆ ಇದೆ. ನೋಟಿಸ್ ಬಂದರೆ ಬೇಕಾದ ಮಾಹಿತಿ ನೀಡಲು ಸಿಸಿಬಿ ರೆಡಿಯಾಗಿದೆ ಎನ್ನಲಾಗಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಎನ್ಐಎ ವಿಚಾರಣೆ ಎದುರಿಸುತ್ತಿದ್ದಾರೆ.