ಬೆಂಗಳೂರು: ತಮ್ಮನ ವೈವಾಹಿಕ ಜೀವನ ಹಾಳಾಯಿತು ಎಂದು ಮನನೊಂದು ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ, 13 ವರ್ಷದ ಮಗನನ್ನ ಸಾಯಿಸಿ ಬಳಿಕ ಆಕೆಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಗುಡ್ಡಹಳ್ಳಿಯ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಲಕ್ಷ್ಮಮ್ಮ ಹಾಗೂ ಆಕೆಯ ಮಗನ ಶವ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಸಗುಡ್ಡಹಳ್ಳಿಯ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದ ಲಕ್ಷ್ಮಮ್ಮನವರ ಗಂಡ ಶಿವಲಿಂಗೇಗೌಡ, ಗಾಂಧಿನಗರದಲ್ಲಿ ಹೋಟೆಲ್ ನಡೆಸುತ್ತಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಎಂದಿನಂತೆ ಶಿವಲಿಂಗೇಗೌಡ ಹಾಗೂ ಹಿರಿಯ ಪುತ್ರ ನವೀನ್ ಹೋಟೆಲ್ಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಕಿರಿಮಗ ಹಾಗೂ ಲಕ್ಷ್ಮಮ ಇಬ್ಬರೇ ಇದ್ದರು.
ಇದನ್ನೂ ಓದಿ: ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಎಂಬಿಬಿಎಸ್ ವಿದ್ಯಾರ್ಥಿ
ನಿನ್ನೆ ರಾತ್ರಿ 9.30 ಸುಮಾರಿಗೆ ಫೋನ್ ಮಾಡಿದ್ರೂ, ಲಕ್ಷ್ಮಮ್ಮ ರೀಸಿವ್ ಮಾಡಿರಲಿಲ್ಲ. ಆತಂಕಗೊಂಡು ಪಕ್ಕದ ಮನೆಗೆ ಪತಿ ಶಿವಲಿಂಗೇಗೌಡ ಕರೆ ಮಾಡಿ ವಿಚಾರಿಸುವಂತೆ ತಿಳಿಸಿದ್ದಾರೆ. ಸ್ಥಳೀಯರು ಮನೆಗೆ ಹೋಗಿ ನೋಡಿದಾಗ, ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬಯಲಿಗೆ ಬಂದಿದೆ. ಮೃತ ಲಕ್ಷ್ಮಮ್ಮ ಸಹೋದರ ಸಿದ್ದೇಗೌಡನಿಗೆ ಕೆಲ ವರ್ಷಗಳ ಹಿಂದೆ ರಂಜಿತಾ ಎಂಬುವವರೊಂದಿಗೆ ಮದುವೆ ಮಾಡಿಸಿದ್ದರು.
ಇಬ್ಬರು ದಂಪತಿ ಮೊದಲಿಗೆ ಚೆನ್ನಾಗಿದ್ದರು. ಕಾಲಕ್ರಮೇಣ ಸಂಸಾರದಲ್ಲಿ ಬಿರುಕು ಮೂಡಿತ್ತು. ತನ್ನ ಗಂಡ ಪೆದ್ದ ಎಂದು ಹೀಯಾಳಿಸಿ ಪತಿಯೊಂದಿಗೆ ಕಿರಿಕ್ ಮಾಡುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಗಂಡ, ಲಕ್ಷ್ಮಮ್ಮ ವಿರುದ್ಧ ದೂರು ನೀಡಿದ ಮೇರೆಗೆ ಪೊಲೀಸರು ಸಿದ್ದೇಗೌಡನನ್ನ ಬಂಧಿಸಿದ್ದರು. ಕೆಲ ದಿನಗಳ ಹಿಂದೆ ರಂಜಿತಾ ಲಕ್ಷ್ಮಮ್ಮ ಮನೆಗೆ ಬಂದು ಕಿರಿಕ್ ಮಾಡಿದ್ದಳು ಎನ್ನಲಾಗ್ತಿದೆ. ಇದರಿಂದ ಮನನೊಂದ ಲಕ್ಷ್ಮಮ್ಮ ನಿನ್ನೆ ರಾತ್ರಿ ಮಗನನ್ನು ಸಾಯಿಸಿ ನಂತರ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.