ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ನೇರವಾಗಿ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದು,ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಆದಿತ್ಯರಾವ್ ಹಿಂದೆಯೂ ಕೆಲ ಘಟನೆಗಳಲ್ಲಿ ಭಾಗಿಯಾಗಿದ್ದರಂತೆ. ಅವರ ಡಿಟೇಲ್ಸ್ ಪೊಲೀಸರು ಕಲೆ ಹಾಕಬೇಕಿದೆ. ಬಿಜೆಪಿಯವರಿಗೆ ಈ ಸುದ್ದಿ ಸಂತೋಷ ತಂದಿರಲಿಕ್ಕಿಲ್ಲ. ಆದಿತ್ಯರಾವ್ ಜಾಗದಲ್ಲಿ ಬೇರೆಯವರಿದ್ದರೆ ಅವರ ಅಭಿಪ್ರಾಯಗಳೇ ಬೇರೆ ಬೇರೆಯಾಗಿರ್ತಿತ್ತು. ಈಗ ಆದಿತ್ಯರಾವ್ ಇರೋದ್ರಿಂದ ಯಾವ ಹೇಳಿಕೆ ಹೊರಬೀಳಲ್ಲ. ಬಹುಶಃ ಬಿಜೆಪಿ ಭಕ್ತರಿಗೆ ಇದು ಸಂತೋಷ ತಂದಿಲ್ಲ ಎಂದರು.
ಕಲಬುರಗಿ,ಗೌರಿ ಲಂಕೇಶ್ ಪ್ರಕರಣ ಏನಾಗಿದೆ?
ಅಲ್ಲೆಲ್ಲ ಸನಾತನ ಸಂಸ್ಥೆಯ ಪಾತ್ರವಿದೆ ಅನ್ನೋದು ಇದೆ. ಬಿಜೆಪಿಯವರು ಡಿಫೆಂಡ್ ಮಾಡಿಕೊಂಡ್ರು. ಗೊತ್ತಿದ್ದರೂ ಏನೂ ಆಗಿಲ್ಲದಂತೆ ಸುಮ್ಮನಿದ್ದಾರೆ. ಆದರೆ ಮುಸ್ಲಿಂರಿದ್ದರೆ ದೊಡ್ಡ ರಂಪಾಟ ಮಾಡ್ತಿದ್ರು. ದೇಶದ್ರೋಹಿಗಳು ಅಂತ ಬಾಯಿ ಬಡಿದುಕೊಳ್ತಿದ್ರು. ಹಿಂದೂ ಆಗುತ್ತಿದ್ದಂತೆ ಸುಮ್ಮನಾಗಿದ್ದಾರೆ. ಬಿಜೆಪಿಯವರ ವರ್ತನೆ ಇದ್ರಿಂದಲೇ ಗೊತ್ತಾಗುತ್ತದೆ. ಬಿಜೆಪಿಯವರು ದೇಶದಲ್ಲಿ ವಿಷವನ್ನೇ ತುಂಬಿಸಿದ್ದಾರೆ ಎಂದರು.
ಬಾಂಬ್ ಬಗ್ಗೆ ಕುಮಾರಸ್ವಾಮಿ ಆರೋಪ ವಿಚಾರ ಮಾತನಾಡಿ, ಪೊಲೀಸರೇ ಮಾಡಿದ್ದಾರೆ ಅಂತ ಹೇಳೋಕೆ ಆಗಲ್ಲ. ಕುಮಾರಸ್ವಾಮಿಯವರು ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಣ್ಣದೋ,ದೊಡ್ಡದೋ ಪೊಲೀಸರು ತನಿಖೆ ಮಾಡಬೇಕಲ್ಲ. ಆದರೆ,ಇವತ್ತು ಬಿಜೆಪಿಯವರಿಗಂತೂ ಡ್ಯಾಮೇಜ್ ಆಗಿದೆ. ಅವರಿಗೆ ಬಾಯಿ ತೆಗೆಯೋಕೆ ಅವಕಾಶವೇ ಸಿಕ್ಕಿಲ್ಲ. ಇವರು ಸರ್ವಾಧಿಕಾರಿ ಧೋರಣೆಯನ್ನ ತಾಳಿದ್ದಾರೆ. ಹಿಂಸೆ,ದ್ವೇಷಕ್ಕೆ ಇವರೇ ಸಹಕಾರ ಕೊಡ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ಗೊಂದಲ ವಿಚಾರ ಮಾತನಾಡಿ, ಬೇಗ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬರಬೇಕು. ನಮ್ಮಲ್ಲೇ ಒಡಕು ಮೂಡಿಸೋಕೆ ನಾಯಕರು ಮುಂದಾಗಬಾರದು. ಪಕ್ಷದ ವೇದಿಕೆಯಲ್ಲೇ ಚರ್ಚಿಸಿಕೊಳ್ಳಬಹುದು. ಯಾವುದನ್ನೂ ಹೊರಗಡೆ ವ್ಯಕ್ತಪಡಿಸೋದು ಸರಿಯಲ್ಲ ಎಂದರು.
ಇನ್ನು,ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದವರ ಅಮಾನತು ವಿಚಾರ ಮಾತನಾಡಿ, ತಪ್ಪು ಮಾಡಿದ ಮೇಲೆ ಕ್ರಮ ತೆಗೆದುಕೊಳ್ಳಬೇಕಲ್ವಾ? ಕೆಪಿಸಿಸಿ ಮುಂದೆ ನಮ್ಮ ನಾಯಕರ ವಿರುದ್ಧ ಪ್ರತಿಭಟನೆ ಸರಿಯಲ್ಲ. ಅದಕ್ಕೆ ಡಿಸಿಪ್ಲಿನರಿ ಆ್ಯಕ್ಷನ್ ತೆಗೆದುಕೊಂಡಿದ್ದೇನೆ. ಯಾರೇ ಅಧ್ಯಕ್ಷರಾದರೂ ಎಲ್ಲರೂ ಸಹಕಾರ ಕೊಡಬೇಕು. ಗುಂಪುಗಾರಿಕೆ ಇದ್ದರೆ ಕೆಲಸ ಮಾಡೋದು ಕಷ್ಟ. ಪಕ್ಷವನ್ನ ಸಂಘಟಿಸೋಕು ಕಷ್ಟವಾಗಲಿದೆ. ಗೊಂದಲಮಯ ವಾತಾವರಣ ಮಾಡಿದರೆ ಸರಿಯೋಗಲ್ಲ. ನಮ್ಮ ಹಿರಿಯ ನಾಯಕರು ಸಹಕಾರ ನೀಡಬೇಕು. ಗೊಂದಲದ ಹೇಳಿಕೆ ನೀಡುವುದನ್ನ ನಿಲ್ಲಿಸಬೇಕು ಎಂದರು.