ಬೆಂಗಳೂರು: ವಾಹನ ಸಾಲದ ಕಂತು ಕಟ್ಟದ ಕಾರಣ ನಿಮ್ಮ ಬೈಕ್ ವಶಪಡಿಸಿಕೊಳ್ಳಲಾಗುವುದು ಎಂದು ದೂರವಾಣಿ ಮೂಲಕ ಹೇಳಿದ ಖದೀಮನೋರ್ವ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು ಬೈಕ್ ಹಾಗೂ ದಾಖಲಾತಿ ಪತ್ರಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿಯಲ್ಲಿ ವಾಸ ಮಾಡುತ್ತಿರುವ ದುರ್ಗಮ್ಮ ಎಂಬುವವರು ಲಾಕ್ಡೌನ್ಗೂ ಮುನ್ನ ಬ್ಯಾಂಕಿನಿಂದ ಲೋನ್ ತೆಗೆದುಕೊಂಡು ಹೊಂಡಾ ಶೈನ್ ಸ್ಕೂಟರ್ ಖರೀದಿಸಿದ್ದರು. ಅದಲ್ಲದೆ ತಿಂಗಳಿಗೆ 3,843 ರೂಪಾಯಿ ಕಂತು ಸಹ ಕಟ್ಟುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ದುರ್ಗಮ್ಮ, ಮೂರು ತಿಂಗಳ ಕಂತನ್ನು ಕಟ್ಟಿರಲಿಲ್ಲ. ಈ ವಿಷಯ ಅರಿತ ಖದೀಮನೋರ್ವ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಕಂತು ಕಟ್ಟಿ, ಇಲ್ಲವಾದರೆ ನಿಮ್ಮ ಬೈಕ್ ಸೀಜ್ ಮಾಡಲಾಗುವುದು ಎಂದಿದ್ದಾನೆ. ಇದಕ್ಕುತ್ತರಿಸಿದ ವಾಹನದ ಒಡತಿ, ಸದ್ಯ ನನ್ನ ಬಳಿ ಕಂತು ಕಟ್ಟಲು ಹಣವಿಲ್ಲ, ಸ್ವಲ್ಪ ಸಮಯ ನೀಡಿ ಎಂದಿದ್ದಾರೆ.
ಇದಾದ ಕೆಲ ದಿನಗಳ ಬಳಿಕ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಮನೆಗೆ ಬಂದ ವ್ಯಕ್ತಿ, ವಾಹನ ದಾಖಲಾತಿಗಳನ್ನು ಪಡೆದು ಬೈಕ್ ಸಮೇತ ಪರಾರಿಯಾಗಿದ್ದಾನೆ. ನಂತರ ಮತ್ತೆ ಕರೆ ಮಾಡಿ 30 ಸಾವಿರ ಹಣ ಕಟ್ಟಿ ಬೈಕ್ ಬಿಡಿಸಿಕೊಂಡು ಹೋಗುವಂತೆ ದುರ್ಗಮ್ಮಗೆ ಹೇಳಿದ್ದಾನೆ. ನನ್ನ ಬಳಿ ಹಣವಿಲ್ಲ, ನೀವೆ ಬೈಕ್ ಇಟ್ಟುಕೊಳ್ಳಿ ಎಂದು ಹೇಳಿದ ದುರ್ಗಮ್ಮ ಕರೆ ಸ್ಥಗಿತಗೊಳಿಸಿದ್ದಾಳೆ.
ಈ ಬಗ್ಗೆ ತಲೆ ಕೆಡಿಸಿಕೊಳ್ಳದ ದುರ್ಗಮ್ಮ ಬೈಕಿನ ಚಿಂತೆ ಬಿಟ್ಟು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಅನ್ಲಾಕ್ ಜಾರಿ ಬಳಿಕ ದುರ್ಗಮ್ಮ ಖಾತೆಯಿಂದ ಹಣ ಕಟ್ ಆಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಬೈಕ್ ಕಂತಿನ ಬಾಬ್ತು ಹಣ ಕಡಿತಗೊಳ್ಳುತ್ತಿರುವುದು ತಿಳಿದು ಬಂದಿದೆ.
ಈ ಬಗ್ಗೆ ಬ್ಯಾಂಕಿಗೆ ತೆರಳಿ ಸಿಬ್ಬಂದಿಯನ್ನು ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ದುರ್ಗಮ್ಮ, ತನ್ನ ಬೈಕ್ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.