ಬೆಂಗಳೂರು: ದುಬೈಯಿಂದ ಬಂದ ವ್ಯಕ್ತಿಯೊಬ್ಬ ಕೈಗೆ 14 ದಿನದ ಗೃಹ ಬಂಧನದ ಸೀಲ್ ಹಾಕಿದ್ರೂ ಕೂಡ ಬೆಂಗಳೂರು ನಗರದಲ್ಲಿ ಓಡಾಡುತ್ತಿರುವುದು ಕಂಡು ಬಂದಿದ್ದು ಕೆಲಕಾಲ ತೀವ್ರ ಆತಂಕಕ್ಕೆ ಕಾರಣವಾಗಿತ್ತು.
ಕಳೆದ ರಾತ್ರಿ 2:30 ಕ್ಕೆ ದುಬೈಯಿಂದ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿದಿದ್ದ ಆ ವ್ಯಕ್ತಿ, ನಂತರ 4:30 ಕ್ಕೆ ಏರ್‌ಪೋರ್ಟ್‌ನಿಂದ ಹೊರ ಬಂದಿದ್ದ. ಅಲ್ಲಿಂದ ಬೆಳಗ್ಗೆ 5 ಗಂಟೆಗೆ ಆಕಾಶ್ ಆಸ್ಪತ್ರೆಯಲ್ಲಿ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ನಂತರ C ಕೆಟಗರಿ ಎಂಬ ಚೀಟಿ ನೀಡಿ ವಾಪಸ್ಸು ಕಳುಹಿಸಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಲು ಆತನಿಗೆ ಸೂಚನೆ ನೀಡಲಾಗಿತ್ತು.
ಆದ್ರೆ ಈತ ಬಸ್ ಮುಖಾಂತರ ನೇರವಾಗಿ ಮೆಜೆಸ್ಟಿಕ್‌ಗೆ ಬಂದಿದ್ದಾನೆ. ಇಲ್ಲಿಂದ ಆತ ಚೆನ್ನೈಗೆ ಹೋಗ್ಬೇಕಿತ್ತು. ಆದರೆ ಬಸ್ ಇಲ್ಲದ ಕಾರಣ ಅಲ್ಲಿಯೇ ಓಡಾಡಿಕೊಂಡಿದ್ದ. ಕೈಗೆ ಸೀಲ್ ಹಾಕಿದ್ದು, ಯಾರೂ ತನಗೆ ರೂಮ್ ನೀಡ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾನೆ.ಹೀಗಾಗಿ, ಮೆಜೆಸ್ಟಿಕ್ ಸುತ್ತಮುತ್ತ ಗೊಂದಲದ ವಾತಾವರಣವೇ ಸೃಷ್ಟಿಯಾಗಿತ್ತು.