ಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಯುವ ಕಾಂಗ್ರೆಸ್ 200 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ ಮಾಡಿ ಗಮನ ಸೆಳೆಯಿತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ತಮ್ಮ ದೇಶಪ್ರೇಮ ಮೆರೆದರು. 200 ಅಡಿ ಉದ್ದದ ರಾಷ್ಟ್ರಧ್ವಜವನ್ನು ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಮೆರವಣಿಗೆ ಮೂಲಕ ತಂದರು. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಇದನ್ನು ಪ್ರದರ್ಶಿಸಲಾಯಿತು.
ಸ್ವಾತಂತ್ರ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ಪ್ರದರ್ಶಿಸುವ ಉದ್ದೇಶಕ್ಕಾಗಿಯೇ ವಾರದ ಹಿಂದೆಯೇ ಸುಮಾರು 60/90 ಅಡಿಗಳ ಬೃಹತ್ ಗಾತ್ರದ ತ್ರಿವರ್ಣ ಧ್ವಜವನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಬೆಂಗಳೂರಿನ ದೇವಾಂಗ ಸಭಾಂಗಣದಲ್ಲಿ ಇದನ್ನ ಸಿದ್ಧಪಡಿಸಿ ಇಡಲಾಗಿತ್ತು. ಇಂದು ಸಮಾರಂಭ ಆರಂಭವಾಗುತ್ತಿದ್ದಂತೆ ದೇವಾಂಗ ಸಭಾಂಗಣದಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು ಧ್ವಜದ ಜೊತೆ ಮೆರವಣಿಗೆ ಬಂದರು. ವೇದಿಕೆ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿಂತಿದ್ದ ವೇಳೆ ತ್ರಿವರ್ಣ ಧ್ವಜವನ್ನು ತಂದು ಪ್ರದರ್ಶಿಸಲಾಯಿತು.
ಸರ್ವಧರ್ಮ ಪ್ರೀತಿ: ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸರ್ವಧರ್ಮ ಪ್ರೀತಿ ಮೆರೆಯಲಾಯಿತು. ಎಲ್ಲಾ ಧರ್ಮದವರನ್ನು ಪ್ರತಿನಿಧಿಸುವ ವೇಷಧರಿಸಿದ್ದ ಸಮೂಹವೊಂದು ಕಾಂಗ್ರೆಸ್ ಭವನದ ಒಳಗೆ ಗಮನ ಸೆಳೆಯಿತು. ವಿವಿಧ ಧರ್ಮೀಯರ ವೇಷಭೂಷಣ ತೊಟ್ಟ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ನಿಂತು ಸರ್ವಧರ್ಮ ಸಮನ್ವಯತೆಯನ್ನು ಸಾರಿದರು. ಕಾಂಗ್ರೆಸ್ ಪಕ್ಷದ ಹಲವು ಕಾರ್ಯಕರ್ತರು ಈ ಸಂದರ್ಭ ವೇಷಧಾರಿಗಳ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡದ್ದು ಕಂಡುಬಂತು.