ಕೆ.ಆರ್.ಪುರ : ಕಪ್ಪುಶಿಲಿಂದ್ರ ರೋಗದ ಚಿಕಿತ್ಸೆಗಾಗಿ ಇಂದು ಕೇಂದ್ರದಿಂದ ರಾಜ್ಯಕ್ಕೆ 9750 ವಯಲ್ಸ್ ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ಒಂದು ವಾರದಲ್ಲಿ ಲಸಿಕೆ ಉತ್ಪಾದನೆ ಕಡಿಮೆಯಾಗಿ ಪೂರೈಕೆಯಲ್ಲಿ ವ್ಯತ್ಯಯವಾದದ್ದು ನಿಜ. ಆದರೆ, ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಏಕರೂಪ ವ್ಯವಸ್ಥೆಗೆ ಕ್ರಮವಹಿಸಿದ್ದು, ರಾಜ್ಯಕ್ಕೆ ಜೂನ್ ಅಂತ್ಯದೊಳಗೆ 50 ಲಕ್ಷ ಲಸಿಕೆ ಪೂರೈಸಲಿದೆ ಎಂದು ಹೇಳಿದರು.
ಸ್ವದೇಶಿಯವಾಗಿಯೂ ಈ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಾಗುತ್ತಿದೆ. ಅದೇ ರೀತಿ ಆಮದಿನ ಪ್ರಮಾಣವನ್ನು ಕೂಡಾ ಹೆಚ್ಚಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದರ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗಲಿದೆ. ಸದ್ಯಕ್ಕಂತೂ ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ ಎಂದರು.
ನಾವು ಮಧ್ಯಪ್ರವೇಶ ಮಾಡಿದ್ದೇವೆ: ಸದ್ಯ ತೀವ್ರ ಬೇಡಿಕೆಯಲ್ಲಿರುವ ಆಮ್ಲಜನಕ ಸಾಂದ್ರಕವನ್ನು (ಆಕ್ಸಿಜನ್ ಕಾನ್ಸಂಟ್ರೇಟರ್ಸ್) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನೆಲೆ ನಾವು ಮಧ್ಯಪ್ರವೇಶ ಮಾಡಿದ್ದೇವೆ. ವಿತರಕರಿಗೆ ನೀಡುವ ಬೆಲೆಯ ಟ್ರೇಡ್ ಮಾರ್ಜಿನ್’ನಲ್ಲಿ (Not profit margin) ಪ್ರತಿಶತ 198 ರವರೆಗೂ ಏರಿಕೆಯಾದ ಬಗ್ಗೆ ವರದಿಯಾಗಿತ್ತು. ಅದನ್ನು ಈಗ ಶೇಕಡಾ 70ಕ್ಕೆ ಮಿತಿಗೊಳಿಸಲಾಗಿದೆ. ಮೂರು ದಿನದೊಳಗೆ ಗರಿಷ್ಠ ಮಾರಾಟ ಬೆಲೆ ಸೂಚಿಯನ್ನು ನೀಡುವಂತೆ ಆಮ್ಲಜನಕ ಸಾಂದ್ರಕ ಉತ್ಪಾದಕರು ಹಾಗೂ ಆಮದುದಾರರಿಗೆ ಸೂಚಿಸಲಾಗಿದೆ ಎಂದರು.
ನಮ್ಮ ಇಲಾಖಾ ಅಧೀನದ ಎನ್.ಪಿ.ಪಿ.ಎ. (National Pharmaceuticals Pricing Authority) ವಾರದೊಳಗೆ ವಿವಿಧ ಬ್ರಾಂಡಿನ ಆಮ್ಲಜನಕ ಸಾಂದ್ರಕಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಗಳ ಅಧಿಸೂಚನೆ ಹೊರಡಿಸಲಿದೆ. ಇದುವರೆಗೆ ಆಮ್ಲಜನಕ ಸಾಂದ್ರಕ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಇರಲಿಲ್ಲವಾಗಿತ್ತು. ಹಾಗಾಗಿ ಅದರ ಬೆಲೆ ನಿಯಂತ್ರಣ ಸಾಧ್ಯವಿರಲಿಲ್ಲ. ಆದರೆ ಜನರ ಅನುಕೂಲಕ್ಕಾಗಿ ಡಿಪಿಸಿಒ-2013 ಕಾಯ್ದೆ ಅನುಚ್ಛೇಧ 19ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಇದರ ಬೆಲೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಾರಾಟ ಮಾಡಲು ಯತ್ನಿಸಿದರೆ ದಂಡ: ಸದ್ಯದ ಬೆಲೆ ನಿಯಂತ್ರಣ ಆದೇಶ 2021 ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಭವಿಷ್ಯದಲ್ಲಿ ಪರಿಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಒಂದೊಮ್ಮೆ ನಿಗದಿತ ಬೆಲೆಗಿಂತ ಯಾರಾದರು ಇದನ್ನು ಮಾರಾಟ ಮಾಡಲು ಯತ್ನಿಸಿದರೆ ಅಂತವರಿಗೆ ಶೇಕಡಾ 100ರಷ್ಟು ದಂಡ ವಿಧಿಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಸರ್ಕಾರ ಖರೀದಿ ಮೂಲ 14 ಲಕ್ಷ ಲಸಿಕೆಯನ್ನು ಜೂನ್‌ನಲ್ಲಿ ಪಡೆಯಲಿದೆ. ಒಟ್ಟಾರೆ 64 ಲಕ್ಷ ಲಸಿಕೆ ಲಭ್ಯವಾಗಲಿದ್ದು, ಯಾರೊಬ್ಬರಲ್ಲೂ ಆತಂಕ ಬೇಡ. ವಿರೋಧ ಪಕ್ಷದ ಕೆಲವು ಮಿತ್ರರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಎಲ್ಲ ಪ್ರಜೆಗಳಿಗೆ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸರ್ಕಾರ ಜೂನ್ ಅಂತ್ಯದೊಳಗೆ 20 ಕೋಟಿ ಲಸಿಕೆ ಹಂಚಿಕೆ ಗುರಿಯಿಟ್ಟುಕೊಂಡಿದೆ. ಈಗಾಗಲೇ ಹೈದರಾಬಾದ್ ಮೂಲದ ಈ ಬಯಾಲಜಿಕಲ್ ಸಂಸ್ಥೆಗೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ಸೇರಿ 30 ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದೆ. ಮಹಾರಾಷ್ಟ್ರ ಸರ್ಕಾರವೂ ಲಸಿಕೆ ಉತ್ಪಾದನೆಗೆ ಕೈಜೋಡಿಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲ ಪ್ರಜೆಗಳಿಗೆ ಲಸಿಕೆ ವಿತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕ್ಷೇತ್ರದ ಎಲ್ಲರಿಗೂ ಕೊರೊನಾ ನಿಯಂತ್ರಣ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದ ಅವರು, ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.
ಓದಿ: ಉಪ ಚುನಾವಣೆ ಫಲಿತಾಂಶದ ಅವಲೋಕನ: ಪ್ರಮುಖ ವಿಷಯಗಳ ಕುರಿತೂ ಸಭೆ ನಡೆಸಿದ ಬಿಜೆಪಿ