ಬೆಂಗಳೂರು: ರಾಜ್ಯದಲ್ಲಿ ಒಟ್ಟು ಮಾಸಾಶನ ಪಡೆಯುತ್ತಿರುವ ದಿವ್ಯಾಂಗ ಜನರ ಸಂಖ್ಯೆ ಬರೋಬ್ಬರಿ 9 ಲಕ್ಷದ 40 ಸಾವಿರದ 65 ರಷ್ಟಿದೆ. ಆದ್ರೆ, ರಾಜ್ಯದ ಎಲ್ಲಾ ದಿವ್ಯಾಂಗ ಜನರಿಗೂ ಮಾಸಾಶನ ಸಿಗುತ್ತಿಲ್ಲ. ಸರ್ಕಾರದ ನಿಯಮಗಳಡಿ ನೋಂದಣಿಗೊಂಡವರಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ.
ಬ್ಯಾಂಕ್ ಖಾತೆ ಹಾಗೂ ಇ-ಮನಿಯಾರ್ಡರ್ ಮೂಲಕ ಮಾಸಾಶನವನ್ನು ಸಾಮಾನ್ಯವಾಗಿ ಸರ್ಕಾರ ಬಿಡುಗಡೆ ಮಾಡುತ್ತಿದೆ. ಕೆಲವು ಪ್ರಕರಣಗಳಲ್ಲಿ ಫಲಾನುಭವಿಗಳು ಬ್ಯಾಂಕ್ ಖಾತೆಯ ಸರಿಯಾದ ವಿವರ, IFSC ಕೋಡ್, ಪಿನ್ಕೋಡ್ ಮಾಹಿತಿ ನೀಡದಿರುವ ಕಾರಣ, ಖಾತೆ ಚಾಲ್ತಿಯಲ್ಲಿಲ್ಲದೇ ಇರುವುದು, ಬ್ಯಾಂಕ್ ಖಾತೆಯ ಮಾಹಿತಿ ಅಪೂರ್ಣವಾಗಿರುವುದು, ಇಲ್ಲವೇ ತಪ್ಪು ವಿಳಾಸ ನೀಡಿರುವ ಕಾರಣಕ್ಕೆ ಮಾಸಾಶನ ಸಿಗುತ್ತಿಲ್ಲ ಎಂಬುದನ್ನು ಸರ್ಕಾರ ಹೇಳಿದೆ.
ಇದೇ ಕಾರಣದಿಂದ ಕೆಲವರಿಗೆ ಪಿಂಚಣಿಯೂ ಪಾವತಿಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿ ಬ್ಯಾಂಕ್ ಖಾತೆ ವಿವರ ಹಾಗು ವಿಳಾಸ ಸೇರಿದಂತೆ ಇತರೆ ನ್ಯೂನತೆ ಸರಿಪಡಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಫಲಾನುಭವಿಗಳು ಅಗತ್ಯ ಮಾಹಿತಿ ನೀಡಿದ್ದಲ್ಲಿ ತೊಂದರೆ ಸರಿಪಡಿಸಿ ತಂತ್ರಾಂಶದಲ್ಲಿ ತಹಶೀಲ್ದಾರರು ಅನುಮೋದನೆ ನೀಡಿದ ನಂತರ ಸರಿಪಡಿಸಲಾದ ಮಾಹಿತಿಯನ್ನು ಖಜಾನೆಗೆ ವರ್ಗಾಯಿಸಿ ಪಿಂಚಣಿ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಮೇಲಿನ ವಿಚಾರವನ್ನು ವಿಧಾನಪರಿಷತ್ ಪದವೀಧರ ಕ್ಷೇತ್ರದ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ವಿಧಾನಪರಿಷತ್ ಕಲಾಪದಲ್ಲಿ ಪ್ರಶ್ನಿಸಿದ್ದು ಇದಕ್ಕೆ ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡಿದ್ದಾರೆ.